ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.29: ಪಟ್ಟಣ ಪಂಚಾಯಿತಿಗೆ ಕಾಂಗ್ರೇಸ್ ಪಕ್ಷದಿಂದ ಅಧ್ಯಕ್ಷೆ ಸ್ಥಾನ ಅಲಂಕರಿಸಿರುವ ಭಾರತಿ ಸುಧಾಕರ ಪಾಟೇಲ್ ಅವರ ಪತಿ ಸುಧಾಕರ ಬಿಜೆಪಿ ಸೇರಿದ್ದರಿಂದ ಅಧ್ಯಕ್ಷರು ತಮ್ಮ ಮುಂದಿನ ನಡೆಯನ್ನು ಬಹಿರಂಗಪಡಿಸಬೇಕು ಎಂದು ಕೊಟ್ಟೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಾರುಕೇಶ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಭಾರತಿ ಸುಧಾಕರ್ ಪಾಟೀಲ್ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಬಳಸಿ ಬಿ ಫಾರಂ ತೆಗೆದುಕೊಂಡು ಗೆಲುವನ್ನು ಸಾಧಿಸಿ ಅಧ್ಯಕ್ಷರಾಗಿದ್ದಾರೆ, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ, ಇವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಪಟ್ಟಣ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪತ್ನಿ ಭಾರತಿ ಪಪಂ ಅಧ್ಯಕ್ಷೆ, ಪತಿ ಸುಧಾಕರ ಬಿಜೆಪಿ, ಈ ಇಬ್ಬಗೆ ನೀತಿ, ಈ ಡ್ರಾಮ ಎಲ್ಲರಿಗೂ ಅರ್ಥವಾಗುತ್ತದೆ. ಪತಿಯ ನಿರ್ಧಾರಕ್ಕೆ ಪತ್ನಿಯೂ ಸಹಮತ ವ್ಯಕ್ತಪಡಿಸುವುದಾದರೆ ಪಪಂ ಅಧ್ಯಕ್ಷೆ ಭಾರತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಈ ಕುರಿತು ನಮಗೆ ಮಾಹಿತಿ ಕೇಳಿದ್ದು, ಕೂಡಲೆ ಮಾಹಿತಿ ನೀಡುತ್ತೇನೆ. ಅಧ್ಯಕ್ಷೆ ಭಾರತಿ ವಿರುದ್ದ ಪಕ್ಷದಿಂದ ಕ್ರಮ ಕೈಗೊಳ್ಳುತ್ತಾರೆ ಅಲ್ಲದೆ ಪಕ್ಷದಿಂದಲೂ ನೋಟೀಸ್ ನೀಡಲಾಗುವುದು ಎಂದರು.
ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ, ಪಪಂ ಉಪಾಧ್ಯಕ್ಷ ಶಫಿ, ಎಸ್.ಸಿ. ಘಟಕದ ತಾಲೂಕು ಅಧ್ಯಕ್ಷ ಪರಶುರಾಮ್, ಕಾಂಗ್ರೇಸ್ ಯುವ ಪ್ರದಾನ ಕಾರ್ಯದರ್ಶಿ ಶಿವಕುಮಾರ ಗೌಡ, ಹೊನ್ನೂರು ಸಾಹೇಬ್, ಎಂ.ಎಂ. ಉಮಾಪತಿ, ಕಾಸಲ ಪ್ರಕಾಶ, ಬಡಿಗೇರ್ ಕೊಟ್ರೇಶ, ಆಚೆಮನಿ ಮಲ್ಲಿಕಾರ್ಜುನ, ಕನ್ನಳ್ಳಿ ಮಲ್ಲಿಕಾರ್ಜುನ, ಪಪಂ ಮಾಜಿ ಸದಸ್ಯ ಪೂಜಾರ್ ನಾಗಪ್ಪ, ಅಡಕಿ ಮಂಜುನಾಥ್, ಕೆಂಪಳ್ಳಿ ಗುರುಸಿದ್ದನಗೌಡ, ಸತೀಶ, ಕಾರ್ತೀಕ್ ಮುಂತಾದವರಿದ್ದರು.