ಪದ್ಮವಿಭೂಷಣ ಪ್ರಶಸ್ತಿಗೆ ಡಾ. ಶರಣಬಸವಪ್ಪ ಅಪ್ಪಾ ಆಯ್ಕೆಗೆ ಸಾರಂಗಧರ ದೇಶಿಕೇಂದ್ರ ಜಗದ್ಗುರುಗಳ ಆಗ್ರಹ

ಕಲಬುರಗಿ:ನ.14: ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಶರಣಬಸವಪ್ಪ ಅಪ್ಪಾ ಅವರು ಶೈಕ್ಷಣಿಕ ಕೇತ್ರಕ್ಕೆ ನೀಡಿದ ಕೊಡುಗೆಯನ್ನು ಕಂಡು ಪದ್ಮವಿಭೂಷಣ ಪ್ರಶಸ್ತಿ ನೀಡಬೇಕು ಎಂದು ಜಗದ್ಗುರು ಶ್ರೀಶೈಲಂ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದ ದೊಡ್ಡಪ್ಪ ಅಪ್ಪಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶರಣಬಸವೇಶ್ವರ್ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ, ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜೀ ಹಾಗೂ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪಾ ಅವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಿಂದುಳಿದ ಕಲಬುರ್ಗಿ ಪ್ರದೇಶವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸುವಲ್ಲಿನ ಅಪ್ಪಾಜೀಯವರ ಕಾರ್ಯವನ್ನು ಗಮನಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.
ಈ ಪ್ರಶಸ್ತಿಗಳನ್ನು ಡಾ. ಅಪ್ಪಾಜೀ ಅವರಿಗೆ ಬಹಳ ಹಿಂದೆಯೇ ನೀಡಬೇಕಾಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ತಪ್ಪನ್ನು ತಕ್ಷಣವೇ ತಿದ್ದುಕೊಳ್ಳಬೇಕು. ಈ ಭಾಗದಲ್ಲಿ ಚುನಾಯಿತ ಪ್ರತಿನಿಧಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದರು.
ಪದ್ಮವಿಭೂಷಣ ಪ್ರಶಸ್ತಿಯನ್ನು ತಕ್ಷಣವೇ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿ ರಾಜ್ಯ ಸರ್ಕಾರವು ಸಂಪುಟದಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಡಾ.ಅಪ್ಪಾಜೀಯವರಿಗೆ ನೀಡುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು. ಮಕ್ಕಳ ಶೈಕ್ಷಣಿಕ ಸಬಲೀಕರಣಕ್ಕಾಗಿ ಡಾ.ಅಪ್ಪಾಜಿ ಅವರ ಕೊಡುಗೆ ಅಪಾರವಾಗಿದೆ. ದೂರದೃಷ್ಟಿಯ ಶಿಕ್ಷಣ ತಜ್ಞರು ಈ ಪ್ರದೇಶದ ಜನರಿಗೆ ಶೈಕ್ಷಣಿಕ ಅವಕಾಶಗಳ ಹೊಸ ದೃಷ್ಟಿಕೋನಗಳನ್ನು ತೆರೆಯುವುದಲ್ಲದೆ, ಶರಣ ಬಸವ ವಿಶ್ವವಿದ್ಯಾಲಯ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ರಾಜ್ಯದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಮಾನ್ಯ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪರವರಿಂದ ಮಾತ್ರ ಈ ಕೆಲಸ ಸಾಧ್ಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡುವುದು ಅಷ್ಟೇ ಅಲ್ಲದೇ ಮುಂದಿನ ಅವಧಿಯನ್ನೂ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶರಣಬಸವೇಶ್ವರ್ ಸಂಸ್ಥಾನ ಮತ್ತು ಶರಣಬಸವೇಶ್ವರ ವಿದ್ಯಾವರ್ದಕ ಸಂಘದ 7ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರ ಮರಣದ ನಂತರ, ಸಂಸ್ಥಾನ ಮತ್ತು ಸಂಘವು 40,000 ರೂ.ಗಳ ಸಾಲದ ಹೊರೆ ಹೊಂದಿತ್ತು. ಮುಂದೆ ಡಾ. ಅಪ್ಪಾ ಅವರು ಎಲ್ಲ ಸಾಲವನ್ನು ಹಿಂದಿರುಗಿಸಿ, ಒಂದರ ನಂತರ ಒಂದು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಮತ್ತು ಅಂತಿಮವಾಗಿ ಶರಣಬಸವ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಕ್ರಮೇಣವಾಗಿ ಶಿಕ್ಷಣ ಸಂಸ್ಥೆಯನ್ನು ಬೆಳಸಿದರು ಎಂದು ಅವರು ಶ್ಲಾಘಿಸಿದರು.
ನೂತನ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಅವರು ಮಾತನಾಡಿ, ಈ ಪ್ರದೇಶದ ಚುನಾಯಿತ ಪ್ರತಿನಿಧಿಗಳು ಸಭೆ ಸೇರಿ ಡಾ. ಅಪ್ಪಾಜೀಯವರಿಗೆ ಶೀಘ್ರದಲ್ಲೇ ಅತ್ಯುನ್ನತ ಗೌರವವನ್ನು ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ನಿಯೋಗವನ್ನು ಹೊರಡಿಸಿ ಡಾ.ಅಪ್ಪಾಜೀಯವರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರಕಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ಧರಾಮಪ್ಪ ಪಾಟೀಲ್ ಧಂಗಾಪೂರ್, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಧಯಾಘನ್ ಧಾರವಾಡ್ಕರ್, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ‘ಪಯಣ’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಯದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ವಾದಿರಾಜ್ ವ್ಯಾಸಮುದ್ರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಡಾ. ಶಿವರಾಜ್ ಶಾಸ್ತ್ರೀ ಹೇರೂರ್ ಅವರ ‘ಶ್ರೀ ಶರಣಬಸವ ಮಹಾದಾಸೋಹ ದರ್ಶನಂ’ ಮಹಾಕಾವ್ಯ, ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಮಹಾವಿದ್ಯಾಲಯ ಪ್ರಿನ್ಸಿಪಾಲ್ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್ ಅವರು ಸಂಪಾದಿಸಿದ ‘ಮಹಾಪ್ರಸಾದಿ’, ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಅವರ ‘ಇನ್ ದ ಟ್ರೂ ಸ್ಪೀರಿಟ್ ಆಫ್ ದಾಸೋಹ’ ಗ್ರಂಥ ಬಿಡುಗಡೆಗೊಳಿಸಿದ ನಂತರ ಕೃತಿ ರಚನೆಕಾರರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ್, ಅತಿಥಿಗಳಾಗಿದ್ದ ರಾಜಶೇಖರ್ ಸ್ವಾಮೀಜಿ, ವಿಶ್ವವಿದ್ಯಾಲಯದ ಇತರೆ ಪ್ರಾಧ್ಯಾಪಕರು ಪೂಜ್ಯರ ವ್ಯಕ್ತಿತ್ವ ಕುರಿತು ಮಾತನಾಡಿದರು.
ಪ್ರಿನ್ಸಿಪಾಲ್ ಡಾ. ಗೀತಾ ಇಂಗಿನಶೆಟ್ಟಿ ಅವರು ಸಂಪಾದಿಸಿದ ‘ಮಹಾದಾಸೋಹಿ’ ಎಂಬ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಇದೇ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ‘ಶರಣ ಸಿರಿ’ ಎಂಬ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ್ ಶಾಸ್ತ್ರೀ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಸುರೇಶ್ ನಂದಗಾಂವ್ ಅವರು ಸ್ವಾಗತಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಪ್ರಾರ್ಥಿಸಿದರು. ಪ್ರೊ. ಚವ್ಹಾಣ್ ಅವರು ವಂದಿಸಿದರು.