ಪದೋನ್ನತಿ ಪಡೆದ ಪಿಎಸ್‍ಐ ಅವರಿಗೆ ಸನ್ಮಾನ

ಸೈದಾಪೂರ: ಸೈದಾಪುರ ಪೊಲೀಸ್ ಠಾಣೆಯಲ್ಲಿ ಪದೋನ್ನತಿ ಪಡೆದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ರಾಮುಲು ಅವರನ್ನು ಶನಿವಾರ ಸನ್ಮಾನಿಸಲಾಯಿತು.
ಪೊಲೀಸ್ ಪೇದೆಯಾಗಿ ಇಲಾಖೆಗೆ ಸೇರಿದ ರಾಮುಲು ಅವರು ಹಂತ ಹಂತವಾಗಿ ಹೆಡ್ ಕಾನ್‍ಸ್ಟೇಬಲ್, ಎಎಸ್‍ಐ ಆಗಿ ಉತ್ತಮ ಕಾರ್ಯನಿರ್ವಹಿಸಿದ್ದು, ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ ಅವರನ್ನು ಪೊಲೀಸ್ ಇಲಾಖೆ ಪಿಎಸ್‍ಐ ಆಗಿ ಮುಂಬಡ್ತಿ ನೀಡಿದ ಹಿನ್ನಲೆಯಲ್ಲಿ ಸೈದಾಪುರ ಠಾಣೆಯಲ್ಲಿ ಸಿವಿಲ್ ಪಿಎಸ್‍ಐ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪಿಎಸ್‍ಐ ರಾಮುಲು ಅವರು ಸಾರ್ವಜನಿಕರ ಹಿತ ರಕ್ಷಣೆ ಪೊಲೀಸ್ ಇಲಾಖೆಯ ಪ್ರಥಮಾದ್ಯತೆಯಾಗಿದೆ. ಜನರು ಸಹ ಸರಕಾರದ ನಿಯಮಗಳನ್ನು ಸಮರ್ಪಕವಾಗಿ ಪಾಲನೆ ಮಾಡುವ ಮುಖಾಂತರ ಇಲಾಖೆಗೆ ಸಹಕರಿಸಬೇಕು. ಇತ್ತೀಚಿನ ದಿನಗಳಲ್ಲಿ ಕಾನೂನಿನ ಬಗ್ಗೆ ಜ್ಞಾನ ಹೊಂದಿರುವ ಸುಶಿಕ್ಷಿತರೇ ನಿಯಮಗಳನ್ನು ಪಾಲನೆ ಮಾಡದಿರುವುದು ಕಾಣುತ್ತಿದ್ದೇವೆ. ಹೆಲ್ಮೇಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ ಯುವಕರು ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಪ್ರಾಣ ಕಳೆದುಕೊಂಡಿರುವ ಸಾವಿರಾರು ಪ್ರಕರಣಗಳನ್ನು ನನ್ನ ಸೇವಾವಧಿಯಲ್ಲಿ ಗಮನಿಸಿದ್ದೇನೆ. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಅಜಲಾಪುರ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕೊತ್ತ ಬದ್ದೇಪಲ್ಲಿ, ಗುರುಮಠಕಲ್ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ನರೇಶ ಮೋಟ್ಕರ್, ಕಲಿಕಾ ಟಾಟಾ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಮಹೇಶ ಡಿ.ಕೆ ಯಾದಗಿರಿ, ಭೀಮು ಹೆಗ್ಗಣಗೇರಾ, ಶಿವುಕುಮಾರ ಕಲಾಲ, ತಾರೇಶ ಯಾದವ, ಖತಾಲ ಹುಸೇನ್ ಸೇರಿದಂತೆ ಮುಂತಾದವರಿದ್ದರು.