ಪದೋನ್ನತಿ: ನ್ಯೂನತೆ ಸರಿಪಡಿಸಲು ಕೋರಿ ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

ಕಲಬುರಗಿ,ಫೆ.23-ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸೇರಿದ ತಹಸೀಲ್ದಾರ ಗ್ರೇಡ್-1 ಅಧಿಕಾರಿಗಳನ್ನು ಕೆ.ಎ.ಎಸ್ (ಕಿ.ಶ್ರೇ) ಗೆ ಪದೋನ್ನತಿ ನೀಡುವಾಗ ನ್ಯೂನತೆಗಳನ್ನು ಸರಿಪಡಿಸುವಂತೆ ಕೋರಿ ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.
ಕಂದಾಯ ಇಲಾಖೆ ಜುಲೈ 7, 2021 ರಂದು ಅಧಿಸೂಚನೆ ಹೊರಡಿಸಿ ಮೂಲವೃಂದ ಮತ್ತು ಹೈ.ಕ ತಹಸೀಲ್ಕಾರ ಗ್ರೇಡ್-2 ವೃಂದದ ಅಧಿಕಾರಿಗಳಿಗೆ ತಹಸೀಲ್ದಾರ ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಿ ಆದೇಶಿಸಿದೆ. ಸದರಿ ಆದೇಶದಂತೆ ಹೈ.ಕ ಅಧಿಕಾರಿಗಳು ಜುಲೈ 07, 2021 ರಿಂದ ಇಲ್ಲಿಯವರೆಗೆ ಗ್ರೇಡ್-1 ತಹಸೀಲ್ದಾರರೆಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದುವರೆದು, ಕಂದಾಯ ಇಲಾಖೆ ಜೂನ್ 21, 2022 ರಂದು ಅಧಿಸೂಚನೆ ಹೊರಡಿಸಿ ತಹಸೀಲ್ದಾರ ಗ್ರೇಡ್-1 ವೃಂದದ ಜೇಷ್ಠತೆಯನ್ನು ಪ್ರಕಟಿಸಿರುತ್ತಾರೆ. ಸದರಿ ಜೇಷ್ಠತೆ ಪಟ್ಟಿಯಲ್ಲಿ ಹೈ.ಕ ಮತ್ತು ಮೂಲ ವೃಂದದ ಅಧಿಕಾರಿಗಳನ್ನು ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ಪಡೆದ ಅಂಕಪಟ್ಟಿಗೆ ಅನುಗುಣವಾಗಿ ಮಾಡಲಾಗಿದೆ. ಆದುದರಿಂದ, ತಹಸೀಲ್ಕಾರ ಗ್ರೇಡ್-1 ಪಟ್ಟಿಯು ಒಂದು “ಸಾಮಾನ್ಯ ಜೇಷ್ಠತಾ ಪಟ್ಟಿಯಾಗಿದ್ದು, ” ಇದನ್ನು ಹೈ.ಕ ಮತ್ತು ಮೂಲ ವೃಂದದ ಎಂದು ಬೇರ್ಪಡಿಸಿ ಕೆ.ಎ.ಎಸ್ (ಕಿ.ಶ್ರೇ) ಹುದ್ದೆಗೆ ಪದೋನ್ನತಿ ನೀಡುವುದು ಸೂಕ್ತವಾಗಿರುವುದಿಲ್ಲ ಎಂದು ತಹಸೀಲ್ದಾರರು ಮನವಿ ಸಲ್ಲಿರಿಸುತ್ತಾರೆ ಎಂದು ಖರ್ಗೆ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ 28855/2023 ಹಾಗೂ 28869/2023 ಹೈಕೋರ್ಟ್ ಆದೇಶ ನೀಡಿರುತ್ತದೆ. ನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಡ್ವೋಕೇಟ್ ಜನರಲ್ ರವರ ಕಛೇರಿಯಿಂದ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಇಲಾಖೆ ರವರಿಂದಲೂ ಸಹ ಈಗಾಗಲೇ ಕಾನೂನು ಅಭಿಪ್ರಾಯ ಪಡೆದುಕೊಂಡಿರುತ್ತದೆ.
ಸದರಿ ಆದೇಶದಂತೆ ತಹಸೀಲ್ದಾರ ಗ್ರೇಡ್-1 ಅಧಿಕಾರಿಗಳನ್ನು ಕೆ.ಎ.ಎಸ್. (ಕಿ.ಶ್ರೇ) ಪದೋನ್ನತಿ ನೀಡುವಾಗ ಹೈದ್ರಾಬಾದ್ ಕರ್ನಾಟಕ ತಹಸೀಲ್ದಾರ ಗ್ರೇಡ್-1 ಅಧಿಕಾರಿಗಳನ್ನು ಪರಿಗಣಿಸುವುದು ಕಾನುನಾತ್ಮಕವಾಗಿದ್ದು, ಸದರಿ ಹೈದ್ರಾಬಾದ ಕರ್ನಾಟಕದ ತಹಸೀಲ್ದಾರ ಗ್ರೇಡ್-1 ಅಧಿಕಾರಿಗಳನ್ನು ಕೆ.ಎ.ಎಸ್. (ಕಿ.ಶ್ರೇ) ಪದನ್ನೋತಿಗೆ ಪರಿಗಣಿಸುವಂತೆ ಹಾಗೂ ಸಂವಿಧಾನದ ಅನುಚ್ಛೇದ-371-ಜಿ ರನ್ವಯ ಹೈದ್ರಾಬಾದ್ ಕರ್ನಾಟಕ ಭಾಗದ ಗ್ರಾಮೀಣ ಅಭ್ಯರ್ಥಿಗಳಿಗೆ ನೇಮಕಾತಿ ಹಾಗೂ ಮುಂಬಡ್ತಿ ಸಮಯದಲ್ಲಿ ಅವರುಗಳಿಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಜೊತೆಗೆ ಜೇಷ್ಠತಾ ಪಟ್ಟಿಯಲ್ಲಿ ಯಾವುದೇ ವ್ಯಾಜ್ಯಗಳಿರುವುದಿಲ್ಲ ಆದರೂ ತಮ್ಮನ್ನು ಪದೋನ್ನತಿಗೆ ಪರಿಗಣಿಸದೇ ಅನ್ಯಾಯವಾಗಿದೆ ಹಾಗಾಗಿ ತಹಸೀಲ್ದಾರ ಗ್ರೇಡ್-1 ವೃಂದದಿಂದ ಕೆ.ಎ.ಎಸ್. (ಕಿ.ಶ್ರೇ) ವೃಂದಕ್ಕೆ ಮುಂಬಡ್ತಿ ನೀಡಿ ನ್ಯಾಯ ದೊರಕಿಸಿಕೊಡುವಂತೆ ಅವರು ಕೋರಿರುತ್ತಾರೆ ಎಂದು ಸಚಿವರು ಹೇಳಿದ್ದಾರೆ.
ಸದರಿಯವರುಗಳ ಮನವಿಯಲ್ಲಿ ಪ್ರಸ್ತಾಪಿಸಿರುವ ವಿಷಯವು ಈಗಾಗಲೇ 371-ಜೆರ ಸಚಿವ ಸಂಪುಟ ಉಪಸಮಿತಿಯ ಸಭೆಯಲ್ಲಿ ಚರ್ಚಿಸಿ, ಜೇಷ್ಠತಾ ಪಟ್ಟಿಗೆ ಸಂಬಂಧಿಸಿದ ನ್ಯೂನತೆಗಳನ್ನು ಸರಿಪಡಿಸಲು ಈಗಾಗಲೇ ನಿರ್ದೇಶನ ನೀಡಲಾಗಿದ್ದು, ಹೈದ್ರಾಬಾದ ಕರ್ನಾಟಕ ವೃಂದದ ತಹಸೀಲ್ಕಾರ ಗ್ರೇಡ್-1 ಅಧಿಕಾರಿಗಳನ್ನು ಕೆ.ಎ.ಎಸ್. (ಕಿ.ಶ್ರೇ) ವೃಂದಕ್ಕೆ ಪದನ್ನೋತಿ ನೀಡಲು ಪರಿಗಣಿಸುವ ಕುರಿತು ನಿಯಮಾನುಸಾರ ಮುಂದಿನ ಅಗತ್ಯ ಕ್ರಮ ವಹಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.