
ಸಿರವಾರ,ಜು.೨೧-
ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ಹಾಜಿ ಚೌದ್ರಿ ಕುಟುಂಬಕ್ಕೆ ಸೇರಿದ ಕುರಿಮಂದೆಯಲ್ಲಿ ಸೋಮವಾರ ತಡರಾತ್ರಿ ಕುರಿಗಳ ಕಳ್ಳತನ ನಡೆದಿದೆ.
ಪಟ್ಟಣದ ದೇವದುರ್ಗ ರಸ್ತೆಯಲ್ಲಿನ ಅವರ ಹೊಲದಲ್ಲಿ ಹಾಕಿದ ಕುರಿ ಡೇರೆಯಲ್ಲಿ ಕುರಿಗಳ ಕಳ್ಳತನ ನಡೆದ ಘಟನೆ ಜರುಗಿದೆ. ಮರುದಿನ ಬೆಳಿಗ್ಗೆ ನೋಡಿದಾಗ ೧೧೪ ಕುರಿಗಳ ಹಿಂಡಿನಲ್ಲಿ ಸಂಖ್ಯೆ ಕಡಿಮೆ ಆದ ಹಿನ್ನೆಲೆಯಲ್ಲಿ ಕುರಿಗಳನ್ನು ಎಣಿಸಿದಾಗ ೧೫ ಕುರಿಗಳು ನಾಪತ್ತೆಯಾಗಿವೆ.
ಕಳೆದ ೨-೩ ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಕೆಲಸಗಾರರು ಪಕ್ಕದ ಟಿನ್ ಶೆಡ್ ನಲ್ಲಿ ನಿದ್ರಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.
ಕುರಿಗಳ ಮೌಲ್ಯ ಸುಮಾರು ೨ ಲಕ್ಷಕ್ಕೂ ಅಧಿಕವಾಗಿದೆ. ಸಾಲಸೋಲ ಮಾಡಿ ತಂದಿದ್ದ ಕುರಿಗಳ ಕಳ್ಳತನದಿಂದ ಕುಟುಂಬಸ್ಥರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ಕಳೆದ ವರ್ಷವೂ ಸಹ ಇವರದ್ದೇ ೧೮ ಕುರಿಗಳು ಕಳುವಾಗಿದ್ದವು. ಪೊಲೀಸರು ಕುರಿಗಳನ್ನೂ ಪತ್ತೆ ಹಚ್ಚಲಿಲ್ಲ. ಕಳ್ಳರನ್ನೂ ಸೆರೆಹಿಡಿಯಲಿಲ್ಲ.
ಕಳ್ಳತನ ಪ್ರಕರಣ ಮರುಕಳಿಸಿದ್ದು, ಕಳ್ಳರಿಗೆ ಪೊಲೀಸರ ಭಯ ಇಲ್ಲದಾಗಿದೆ. ಜನರಿಗೆ ಕಳ್ಳರ ಭಯ ಶುರುವಾಗಿದೆ. ರಾತ್ರಿ ನಿದ್ರೆ ಮಾಡದೆ ತಮ್ಮ ಜಾನುವಾರುಗಳನ್ನು ಕಾಯುವಂತಾಗಿದೆ.
ಈ ಕುರಿತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಕುರಿ ಕಳ್ಳರ ಸೆರೆಗೆ ಪ್ರಯತ್ನ ನಡೆಸಿದ್ದಾರೆ.
ಕಳ್ಳತನ ಪ್ರಕರಣಗಳು ಸಿರವಾರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಿತಿ ಮೀರುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಪೊಲೀಸರು ಕಳ್ಳರನ್ನು ಬಂಧಿಸಿ, ಕದ್ದ ವಸ್ತುಗಳು, ಕುರಿಗಳನ್ನು ಸಂಬಂಧಿಸಿದವರಿಗೆ ತಲುಪಿಸಬೇಕು ಜನರು ಎಂದು ಒತ್ತಾಯಿಸಿದ್ದಾರೆ.