ಪದಾಧಿಕಾರಿಗಳ ನೇಮಕ

ಹುಬ್ಬಳ್ಳಿ,ಮಾ25: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ.ಜಾ/ಪ.ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಹುಬ್ಬಳ್ಳಿ ಗ್ರಾಮಾಂತರ ವಿಭಾಗ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗಗಳಿಗೆ ನೂತನವಾಗಿ ವಿಭಾಗೀಯ ಪದಾಧಿಕಾರಿಗಳ ನಿಯೋಜನೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಎಸ್.ಆರ್. ಅದರಗುಂಚಿ ಅವರ ನೇತೃತ್ವದಲ್ಲಿ ರಚಿಸಲಾಯಿತು.
ರಂಗಣ್ಣ ತಳವಾರವರು ಮಾತನಾಡಿ ಸಂಘದ ಧ್ಯೇಯೋದ್ದೇಶಗಳ ಬಗ್ಗೆ ಸವಿಸ್ತಾರವಾಗಿ ನೂತನ ಪದಾಧಿಕಾರಿಗಳಿಗೆ ತಿಳಿಸಿದರು ಹಾಗೂ ಸಂಸ್ಥೆಯ ಅಬಿವೃಧ್ಧಿಗಾಗಿ ಸಂಘದ ಪಾತ್ರವೇನು, ಸಂಘದ ಸದಸ್ಯರ ಸಮಸ್ಯೆಗಳನ್ನರಿತು ನ್ಯಾಯ ದೊರಕಿಸಿ ಕೊಡುವಲ್ಲಿ ಪದಾಧಿಕಾರಿಗಳ ಕರ್ತವ್ಯಗಳೇನೆಂಬುದರ ಬಗ್ಗೆ ವಿವರಣೆ ನೀಡಿದರು.
ಸಂಘದ ಅಧ್ಯಕ್ಷರಾದ ಎಸ್.ಆರ್.ಅದರಗುಂಚಿಯವರು ನೇಮಕಗೊಂಡ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಿ, ಸಂಸ್ಥೆ ಇದ್ದರೆ ಸಂಘ, ಸಂಘ ಇದ್ದರೆ ನಾವು, ನಾವುಗಳೆಲ್ಲಾ ನಮ್ಮ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ನ್ಯಾಯವೆಂಬುದು ನಾವಿದ್ದಲ್ಲೆ ಹುಡುಕಿಕೊಂಡು ಬರುತ್ತದೆ. ಒಂದು ವೇಳೆ ತಮಗೇನಾದರು ಅನ್ಯಾಯವಾದರೆ ತಮ್ಮ ನ್ಯಾಯ ರಕ್ಷಣೆಗಾಗಿ ಸಂಘವು ಸದಾ ಸಿದ್ಧವಿದೆ ಎಂಬ ಭರವಸೆ ನೀಡಿದರು. ಸಂಘದ, ಸಮುದಾಯದ, ಸಂಸ್ಥೆಯ, ಸಮಗ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ನೂತನಪದಾಧಿಕಾರಿಗಳಿಗೆ ಸಂಘದ ಮುಖಂಡರು ಹಾಗೂ ಸದಸ್ಯರು ಶುಭ ಕೋರಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಕಾರ್ಯಾಧ್ಯಕ್ಷ ಜಿ.ಎಚ್.ಯಾವಗಲ್, ಕೋಶಾಧ್ಯಕ್ಷ ಎಸ್.ಬಿ. ಗುಡಿ ಹಾಗೂ ಧಾರವಾಡ ವಿಭಾಗದ ಅಧ್ಯಕ್ಷ ಡಿ.ಎಫ್. ನಾಯಕರ ಉಪಸ್ಥಿತರಿದ್ದರು.