ಪದವೀಧರ ಮತದಾರರ ನೊಂದಣಿಗೆ ವಾಸಸ್ಥಳ ಪ್ರಮಾಣಪತ್ರ ಕಡ್ಡಾಯ ರದ್ದತಿಗೆ ಮಟ್ಟೂರ್ ಒತ್ತಾಯ

ಕಲಬುರಗಿ,ಅ.15: ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಪದವೀಧರ ಮತದಾರರ ಹೆಸರು ನೊಂದಣಿಗೆ ಸಂಬಂಧಿಸಿದಂತೆ ವಾಸಸ್ಥಳ ಪ್ರಮಾಣಪತ್ರ ಸೇರಿದಂತೆ ಅನಗತ್ಯ ದಾಖಲೆಗಳನ್ನು ಪರಿಗಣಿಸದೇ ಇರುವಂತೆ ಚುನಾವಣಾ ಆಯೋಗವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಶರಣಪ್ಪ ಮಟ್ಟೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸಸ್ಥಳಕ್ಕೂ ಮತದಾರರ ಹೆಸರು ನೊಂದಣಿಗೂ ಯಾವುದೇ ಸಂಬಂಧವಿಲ್ಲ. ಅಗತ್ಯವಿರುವ ದಾಖಲೆಗಳನ್ನು ಪರಿಗಣಿಸುವ ಮೂಲಕ ಪದವೀಧರ ಮತದಾರರು ಸುಲಭವಾಗಿ ಹಾಗೂ ಸರಳವಾಗಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಶಾನ್ಯ ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮತದಾರರ ಹೆಸರು ನೊಂದಣಿಗೆ ರಾಜ್ಯ ಚುನಾವಣಾ ಆಯೋಗವು ಕ್ರಮ ಕೈಗೊಂಡಿದೆ. ಈಗಾಗಲೇ ಕ್ಷೇತ್ರದಲ್ಲಿ ಪದವೀಧರ ಮತದಾರರ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದೆ. ಅದಕ್ಕೆ ಮುಖ್ಯ ಕಾರಣ ಮತದಾರರ ಹೆಸರು ನೊಂದಣಿ ಸಂದರ್ಭದಲ್ಲಿ ಹಲವಾರು ದಾಖಲೆಗಳನ್ನು ಕೇಳುತ್ತಿರುವುದರಿಂದ ಆ ಎಲ್ಲ ದಾಖಲೆಗಳನ್ನು ಕ್ರೋಢಿಕರಿಸಿ ಹೆಸರು ನೊಂದಾಯಿಸುವುದು ಪದವೀಧರ ಮತದಾರರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಮತದಾರರ ಸಂಖ್ಯೆ ಇಳಿಮುಖವಾಗಿದೆ. ಹಾಗಾಗಿ ಪ್ರತಿಯೊಬ್ಬ ಪದವೀಧರ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲು ಚುನಾವಣಾ ಆಯೋಗವು ಈಗಿರುವ ನಿಯಮಗಳಲ್ಲಿ ಸರಳೀಕರಣಗೊಳಿಸಬೇಕು ಎಂದು ಅವರು ಹೇಳಿದರು.
ಪದವೀಧರ ಮತದಾರರ ಹೆಸರು ನೊಂದಣಿಗೆ ಪದವಿ ಪ್ರಮಾಣಪತ್ರ, ಸ್ವಯಂ ದೃಢೀಕರಣ, ಆಧಾರ್ ಇಲ್ಲವೇ ಚುನಾವಣಾ ಗುರುತಿನ ಚೀಟಿ ಮಾತ್ರ ಅಗತ್ಯವಿದೆ. ಆ ಮೂಲಕ ಪದವೀಧರ ಮತದಾರರು ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಆಧಾಗ್ಯೂ, ವಾಸಸ್ಥಳ ಪ್ರಮಾಣಪತ್ರವನ್ನೂ ಕೇಳುತ್ತಿದ್ದಾರೆ. ವಾಸಸ್ಥಳ ಪ್ರಮಾಣಪತ್ರ ಅನಗತ್ಯವಾಗಿದ್ದು, ಅದನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಪದವೀಧರ ಮತದಾರರು ತಮ್ಮ ಹೆಸರುಗಳನ್ನು ನೊಂದಣಿಯನ್ನು ನವೆಂಬರ್ 6ರೊಳಗೆ ಮಾಡಿಕೊಳ್ಳಬೇಕು. ಆ ಹಿನ್ನೆಲೆಯಲ್ಲಿ ಈಶಾನ್ಯ ಪದವೀಧರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಲಬುರ್ಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯನಗರ ಮತ್ತು ಕೊಪ್ಪಳ್ ಮುಂತಾದ ಏಳು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವು ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
8 ಜನ ಆಕಾಂಕ್ಷಿಗಳು: ಈಶಾನ್ಯ ಪದವೀಧರ ಮತಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಏಳು ಜನ ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲ ಆಕಾಂಕ್ಷಿಗಳು ಬದ್ಧರಿದ್ದಾರೆ ಎಂದು ಅವರು ಹೇಳಿದರು.
ಈಶಾನ್ಯ ಪದವೀಧರ ಮತಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ತಿಳಿಸಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಲಿಷ್ಠ ನಾಯಕತ್ವದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಅದರಲ್ಲಿಯೂ 371(ಜೆ) ಕಲಂ ಜಾರಿಯಿಂದಾಗಿ ಈ ಭಾಗದ ಅನೇಕರು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ತಿಮ್ಮಯ್ಯ ಪುರ್ಲೆ, ಬಸವರಾಜ್ ಗುರಿಕಾರ್, ಪಿ.ಎಸ್. ಕೊಕಟನೂರ್, ಭೂಪೇಂದ್ರಸಿಂಗ್, ಡಾ. ಚಿ.ಸಿ. ಲಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು.