ದಾವಣಗೆರೆ.ಏ.2; ಭಾರತ ದೇಶದಲ್ಲೇ ವಾರ್ಷಿಕವಾಗಿ ಸುಮಾರು ನಾಲ್ಕೂವರೆ ಕೋಟಿಯಷ್ಟು ಪದವೀಧರರು ಹೊರ ಬರುತ್ತಿದ್ದು ಎಲ್ಲರಿಗೂ ಉದ್ಯೋಗ ಕೊಡಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ, ಪದವೀಧರರು ತಮ್ಮ ಬೌದ್ಧಿಕ ಸಾಮರ್ಥ್ಯದಿಂದ ಸ್ವಂತ ಮಾರ್ಗ ಕಂಡುಕೊಳ್ಳಬೇಕು ಎಂದು ಬೆಂಗಳೂರಿನ ಟ್ಯಾಲಿ ಸಲ್ಯೂಷನ್ ನ ಮುಖ್ಯ ಅಧಿಕಾರಿ ಎಸ್ ಜೆ ನಾಗನಗೌಡ ಹೇಳಿದರು. ಅವರು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನಿನ ಬಿ.ಸಿ.ಎ. ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಈಗಿನ ಅಂತರ್ಜಾಲ ವ್ಯಾಪಕತೆಯ ಮುಂದೆ ಇಡೀ ವಿಶ್ವವೇ ಕಿರಿದಾಗಿದೆ, ಇದರ ಬಳಕೆಯನ್ನು ವೈಯಕ್ತಿಕ ಹಾಗೂ ವಿಶ್ವಾತ್ಮಕ ಕಲ್ಯಾಣಕ್ಕಾಗಿ ಬಳಸಿಕೊಳ್ಳುವುದು ಯುವಶಕ್ತಿಯ ಹೊಣೆಯಾಗಿದೆ, ಇಡೀ ಪ್ರಪಂಚವೇ ತಮ್ಮ ದೇಶಗಳ ವಾಣಿಜ್ಯಾತ್ಮಕ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಭಾರತದತ್ತ ನೋಡುತ್ತಿವೆ, ನಾವು ಇದಕ್ಕೆ ಪ್ರತಿಕ್ರಿಯಿಸದೆ ಹೋದರೆ ಅವೆಲ್ಲ ಬೇರೆ ದೇಶಗಳತ್ತ ಮುಖ ಮಾಡಬಹುದು,ಪರಿಹಾರಗಳು ಕಡಿಮೆ ವೆಚ್ಚದವು ಹಾಗೂ ಪರಿಣಾಮಕಾರಿಯೂ ಆಗಿರಬೇಕು ಎಂದ ನಾಗನಗೌಡರು ಭವಿಷ್ಯದ ಜಗತ್ತಿನ ಕರೆನ್ಸಿ ಗಳಾಗಿ ಡಾಲರ್ ಯುರೋಗಳು ಇರುವುದಿಲ್ಲ, ಬದಲಾಗಿ ಜ್ಞಾನ, ಸಾಮರ್ಥ್ಯ ಮತ್ತು ಅಂಕಿ ಅಂಶಾದಿಗಳೇ ಭವಿಷ್ಯದ ಜಗತ್ತಿನ ಕರೆನ್ಸಿ ಗಳಾಗಲಿವೆ, ಕಲಿಕೆಯ ದಾಹ ಇದ್ದವರು ಮಾತ್ರ ಇದನ್ನು ಹೊಂದಿ ಚಲಾಯಿಸಬಹುದು, ಶಿಕ್ಷಣದಲ್ಲಿ ಸಮಸ್ಯೆಗಳಿಗೆ ಪರಿಹಾರ ಹೇಳಬಹುದಾದರೂ ಉದ್ದಿಮೆ ರಂಗದ ಸವಾಲುಗಳಿಗೆ ಪರಿಹಾರ ನಾವೇ ಹುಡುಕಿಕೊಳ್ಳಬೇಕು, ಇದಕ್ಕಾಗಿ ಪುನರ್ ಕಲಿಕೆ ನಿರಂತರ ನಡೆಯುತ್ತಿರಬೇಕು ಎಂದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಬಾಪೂಜಿ ವಿದ್ಯಾ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ ಜಿ ಈಶ್ವರಪ್ಪ ತಂತ್ರಜ್ಞಾನದ ಅಭಿವೃದ್ಧಿಯ ಜೊತೆಗೆ ಸವಾಲುಗಳೂ ವೃದ್ಧಿ ಆಗುತ್ತಿವೆ, ಇವುಗಳನ್ನು ಎದುರಿಸಲು ಶಿಸ್ತು, ಶ್ರದ್ಧೆ ಮತ್ತು ಶ್ರಮ ಈ ಮೂರು ಅತ್ಯವಶ್ಯ, ಪದವಿಗೆ ತಕ್ಕ ಉದ್ಯೋಗಗಳಿಸಿಕೊಳ್ಳಬೇಕೆಂದರೆ ಜ್ಞಾನದೊಂದಿಗೆ ಕೌಶಲ್ಯವೂ ಬೇಕು ಎಂದರು. ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯಡಾ. ಬಿ ವೀರಪ್ಪನವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ನಿರ್ದೇಶಕ ಡಾ ಸ್ವಾಮಿ ತ್ರಿಭುವನಾನಂದ ಉಪಸ್ಥಿತರಿದ್ದರು. ಪದವೀಧರರಿಗೆ ನವೀನ್ ಹೆಚ್. ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೀತಿ ಮತ್ತು ತಂಡದವರು ಪ್ರಾರ್ಥನೆ ಹಾಡಿದರೆ ಅಂಜನಾದ್ರಿ ಎಲ್.ಟಿ. ಸ್ವಾಗತ ಕೋರಿದರು. ಸ್ವಾತಿ ಡಿ.ಎಂ., ಪ್ರಶಾಂತಿನಿ ಬಿ.ಎಂ. ಅತಿಥಿಗಳ ಪರಿಚಯ ಮಾಡಿದರು. ಶಿವರಂಜಿನಿ ವಂದನೆ ಸಲ್ಲಿಸಿದರು.