ಪದವಿ ಶಿಕ್ಷಣ ಮೂರು ವರ್ಷಗಳಿಗೆ ಸೀಮಿತ ಆದೇಶ ವಾಪಸ್ ಪಡೆಯಲು ನಮೋಶಿ ಒತ್ತಾಯ

ಕಲಬುರಗಿ:ಮೇ.11: ರಾಜ್ಯದಲ್ಲಿ ಪದವಿ ಶಿಕ್ಷಣದ ಅವಧಿಯನ್ನು ನಾಲ್ಕು ವರ್ಷದ ಬದಲು ಮೂರು ಮೂರು ವರ್ಷಕ್ಕೆ ಸೀಮಿತಗೊಳಿಸಿ ಸರ್ಕಾರ ಹೊಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯಬೇಕು ಎಂದು ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಬದಲು ರಾಜ್ಯ ಶಿಕ್ಷಣ ನೀತಿ (ಎಸ್‍ಇಪಿ) ಜಾರಿಗೆ ತರುವ ಮುನ್ನ ಈ ಬಗ್ಗೆ ಸಾಕಷ್ಟು ಶಿಕ್ಷಣ ತಜ್ಞರು, ಶೈಕ್ಷಣಿಕ ಆಡಳಿತ ಮಂಡಳಿಗಳು, ಶೈಕ್ಷಣಿಕ ಹಾಗೂ ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಹಾಗೂ ವಿದ್ಯಾರ್ಥಿ, ಶಿಕ್ಷಕರ ಸಂಘಗಳ ಜೊತೆ ಸಾಕಷ್ಟು ಚರ್ಚೆ ನಡೆಸಬೇಕಾಗಿತ್ತು. ಯುಜಿಸಿ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ಸಮಿತಿ ಎಸ್‍ಇಪಿ ಜಾರಿ ಕುರಿತಂತೆ ಕೇವಲ ಮಧ್ಯಂತರ ವರದಿಯನ್ನμÉ್ಟೀ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಆ ವರದಿಯಲ್ಲಿ ಏನು ಶಿಫಾರಸು ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ವರದಿಯಲ್ಲಿರುವ ವಿಚಾರಗಳ ಬಗ್ಗೆ ಚರ್ಚೆಯೂ ನಡೆದಿಲ್ಲ. ಈಗ ಮಧ್ಯಂತರ ವರದಿಯನ್ನು ಮುಂದಿಟ್ಟುಕೊಂಡು ಏಕಾಏಕಿ ಪದವಿ ಶಿಕ್ಷಣದ ಅವಧಿಯನ್ನು ನಾಲ್ಕರಿಂದ ಮೂರು ವರ್ಷಕ್ಕೆ ಇಳಿಕೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಅವರು ಹೇಳಿಕೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪರಿಷತ್‍ನ ಸಲಹೆ ಪಡೆದಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಚರ್ಚೆಗೂ ಆಸ್ಪದ ನೀಡಿಲ್ಲ. ದೇಶದ ಎಲ್ಲೆಡೆ ಜಾರಿಗೆ ಬಂದಿರುವ ಎನ್‍ಇಪಿ ವ್ಯವಸ್ಥೆಯನ್ನು ಕೈಬಿಟ್ಟು ಎಸ್‍ಇಪಿ ಜಾರಿಗೆ ಮುಂದಾಗುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಪಾಯ ತಂದೊಡ್ಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಾಲ್ಕು ವರ್ಷದ ಪದವಿ ಪೂರೈಸಿದವರು ನೇರ ನೀಟ್ ಪರೀಕ್ಷೆಗೆ ಬರೆಯಬಹುದು. ಉನ್ನತ ಪದವಿ ಪಡೆದವರು ನೇರವಾಗಿ ಪಿಎಚ್‍ಡಿ ಪ್ರವೇಶ ಮಾಡಬಹುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಆದೇಶಿಸಿದೆ. ಹಾಗಿರುವಾಗ ಈಗ ಮೂರು ವರ್ಷದ ಪದವಿ ಮಾಡಿದರೆ ಅದರಿಂದ ಉಂಟಾಗಬಹುದಾದ ಪರಿಣಾಮದ ಬಗ್ಗೆ ಸರ್ಕಾರ ಯೋಚಿಸಿದೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ವಿರೋಧಿಸುತ್ತಿರುವ ಕೇರಳ್, ಪಶ್ಚಿಮ ಬಂಗಾಳ್ ಸರ್ಕಾರಗಳೂ ಎನ್‍ಇಪಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿವೆ. ದೇಶದ ಶಿಕ್ಷಣ ವ್ಯವಸ್ಥೆ ಜತೆ ಹೆಜ್ಜೆ ಹಾಕಲು ಈ ರಾಜ್ಯಗಳು ನಿರ್ಧರಿಸಿದರೆ ಕರ್ನಾಟಕ ಸರ್ಕಾರ ಮಾತ್ರ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ ಎಂಬ ರಾಜಕೀಯ ಉದ್ದೇಶಕ್ಕಾಗಿ ಎಸ್‍ಇಪಿ ಜಾರಿಗೆ ತೀರ್ಮಾನಿಸಿದೆ. 2007ರ ಶಿಕ್ಷಣ ಕಾಯ್ದೆಯನ್ವಯ ಎಸ್‍ಇಪಿ ಜಾರಿಗೊಳಿಸುವುದರಿಂದ ಶಿಕ್ಷಣದಲ್ಲೂ ರಾಜ್ಯ ಹಿಂದಕ್ಕೆ ಹೋಗುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ರಾಜ್ಯದಲ್ಲಿ ಎಸ್‍ಇಪಿ ಜಾರಿಗೊಳಿಸಿದರೆ ಮುಂದೆ ಪದವಿ ತರಗತಿಯಲ್ಲಿ ಮೂರು ಪರೀಕ್ಷೆಗಳನ್ನು ಎದುರಿಸುವ ಸಂಭವ ಬರಬಹುದು. ಈಗಾಗಲೇ ಎನ್‍ಇಪಿಯಡಿ ಪ್ರವೇಶ ಪಡೆದಿರುವವರಿಗೆ ಪರೀಕ್ಷೆ ನಡೆಸಬೇಕು. ಅದರಲ್ಲೇ ಮುಂದಿನ ಅಧ್ಯಯನ ನಡೆಸುತ್ತಿರುವವರಿಗೆ ಪರೀಕ್ಷೆ ಹಾಗೂ ಎಸ್‍ಇಪಿ ಅಡಿಯಲ್ಲಿ ಪ್ರವೇಶ ಪಡೆದವರಿಗೂ ಪ್ರತ್ಯೇಕ ಪರೀಕ್ಷೆ ಸೇರಿ ಮೂರು ವಿಧದಲ್ಲಿ ಪರೀಕ್ಷೆ ನಡೆಸುವ ಅನಿವಾರ್ಯತೆ ಬರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗೆ ಶಿಕ್ಷಣಕ್ಕೆ ಅಪಾಯ ತಂದೊಡ್ಡುವ ಕೆಲಸ ರ್ಕಾರ ಮಾಡುತ್ತಿದೆ ಇದು ವಿದ್ಯರ್ಥಿಗಳ ಹಿತದೃಷ್ಟಿಯಿಂದ ಮಾಡುತ್ತಿಲ್ಲ ಕೇವಲ ರಾಜಕಾರಣಕ್ಕಾಗಿ ಈ ಕೃತ್ಯಕ್ಕೆ ಕೈ ಹಾಕಿದೆ ರಾಜಕೀಯ ಉದ್ದೇಶಕ್ಕಾಗಿ ಎಸ್‍ಇಪಿ ಜಾರಿಗೆ ತೀರ್ಮಾನಿಸಿದೆ. ಮೂರು ಪರೀಕ್ಷೆ ನಡೆಸಿ ಸಕಾಲದಲ್ಲಿ ಫಲಿತಾಂಶ ನೀಡಲು ಈಗಾಗಲೇ ಸಂಪನ್ಮೂಲ ಕೊರತೆ ಎದುರಿಸುತ್ತಿರುವ ವಿವಿಗಳಿಗೆ ಸಾಧ್ಯವಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಎನ್‍ಇಪಿಯ ನಾಲ್ಕು ವರ್ಷದ ಪದವಿ ಶಿಕ್ಷಣದಲ್ಲಿ ಯಾವ ವರ್ಷ ಬೇಕಾದರೂ ಕಲಿಕೆ ಪೂರೈಸಬಹುದು. ಆಯಾ ವರ್ಷಕ್ಕೆ ಪ್ರತ್ಯೇಕ ಸರ್ಟಿಫಿಕೆಟ್ ನೀಡಲಾಗುತ್ತದೆ. ಇದರಿಂದ ಉದ್ಯೋಗಕ್ಕೂ ತೊಂದರೆಯಾಗುವುದಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ತಿಳಿದುಕೊಳ್ಳದೆ ಸರ್ಕಾರ ರಚನೆಯಾದ ಕೂಡಲೇ ಸಂಪುಟದಲ್ಲಿ ನಿರ್ಧಾರ ಕೈಗೊಂಡು, ಅಲ್ಲೇ ಪಠ್ಯಕ್ರಮ ಬದಲಾಯಿಸಲಾಗಿದೆ. ಎಸ್‍ಇಪಿ ಜಾರಿಗೆ ತರಲು ಹೊರಟಿರುವುದನ್ನು ವಿರೋಧಿಸುವುದಾಗಿ ಹೇಳಿದ ಅವರು, ಪಿಯುಸಿ ಪ್ರವೇಶಕ್ಕೆ ಹೊಸ ಪದ್ಧತಿ ಜಾರಿಗೆ ತರಲು ಸಿದ್ಧತೆ ನಡೆಸುವುದನ್ನು ಪ್ರಖರವಾಗಿ ವಿರೋಧಿಸಿದ್ದಾರೆ.
ಪಿಯುಸಿ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಪಿಯು ಪೋರ್ಟಲನಲ್ಲಿ ದಾಖಲಿಸಬೇಕು ಎಂಬ ಮಾರ್ಗಸೂಚಿಯನ್ನು ಪಿಯು ಶಿಕ್ಷಣ ಮಂಡಳಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ ನಮೋಶಿ ಅವರು, 10ನೇ ತರಗತಿ ಫಲಿತಾಂಶ ಬಂದು ಈಗ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಈ ಹಂತದಲ್ಲಿ ಇಂತಹ ಮಾರ್ಗ ಸೂಚಿ ಹೊರಡಿಸಿದ್ದು, ಅದರ ಪಾಲನೆ ಕಷ್ಟ ಸರ್ಕಾರಿ ಕಾಲೇಜುಗಳಲ್ಲಿ ಬೋಧಕೇತರ ಸಿಬ್ಬಂದಿಯೇ ಇಲ್ಲ. ಅನುದಾನಿತ ಕಾಲೇಜುಗಳಲ್ಲಿ 15 ವರ್ಷಗಳಿಂದ ಬೋಧಕೇತರ ಸಿಬ್ಬಂದಿಯ ನೇಮಕವಾಗಿಲ್ಲ. ಇನ್ನು ಅನುದಾನ ರಹಿತ ಕಾಲೇಜುಗಳಿಗೂ ಇದರ ಪಾಲನೆ ಅಸಾಧ್ಯ. ಹೊಸ ವ್ಯವಸ್ಥೆ ಜಾರಿಗೂ ಮುನ್ನ ಸಾಕಷ್ಟು ಅವಕಾಶ ನೀಡಬೇಕಾಗಿತ್ತು. ಈಗ ಪ್ರವೇಶ ಆರಂಭವಾಗಿರುವ ಸಂದರ್ಭದಲ್ಲಿ ಇದನ್ನು ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ನೀತಿ ವಾಪಸ್ ಪಡೆಯದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.