ಪದವಿ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಪದವಿ ಲೀಡ್ ಕಾಲೇಜ್, ದಾವಣಗೆರೆ ಇವರುಗಳ ಸಹಯೋಗದೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಗರದ ಎಲ್ಲ ಕಾಲೇಜು ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ.ಬಿ.ಇಟ್ನಾಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು. ಲೋಕಸಭಾ ಚುನಾವಣೆ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಸುಮಾರು 45 ದಿನಗಳಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಮಾಡಿದ್ದೇವೆ. ಈ ದಿನ ಬಹುದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದಾರೆ. ಇದೇ ಉತ್ಸಾಹದಲ್ಲಿ ತಾವು ಮತದಾನ ಮಾಡಿ ನೆರೆಹೊರೆಯವರನ್ನು ಮತದಾನ ಮಾಡಲು ಸ್ವಯಂಪ್ರೇರಿತರಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇದು ದೇಶ ಸೇವೆಯಾಗಿದ್ದು ದೇಶಕ್ಕೆ ಉತ್ತಮ ನಾಯಕರು ಆಯ್ಕೆಯಾದಾಗ ಯುವ ಜನರಿಗೆ ಭವಿಷ್ಯದ ಯೋಜನೆಗಳು ದೊರಕಲಿವೆ. ಅತ್ಯುತ್ತಮರು ಆಯ್ಕೆಯಾಗಲು ಎಲ್ಲರೂ ಮತದಾನ ಮಾಡಬೇಕೆಂದರು.ಚುನಾವಣಾ ರಾಯಭಾರಿ ಪೃಥ್ವಿ ಶಾಮನೂರು ಮಾತನಾಡಿ ಮೇ 7 ರಂದು ಎಲ್ಲರು ತಪ್ಪದೇ ಮತದಾನ ಮಾಡಿ. ನಿಮ್ಮ ಸ್ನೇಹಿತರಿಗೂ, ಸಂಬಂಧಿಕರಿಗೂ ಅಕ್ಕ ಪಕ್ಕದ ಮನೆಯವರಿಗೂ ಮತಚಲಾಯಿಸುವುದಕ್ಕೆ ಪ್ರೇರೆಪಿಸಬೇಕು ಎಂದರು.ಜಾಥಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಪ್ರಾರಂಭವಾಗಿ ಗುಂಡಿ ವೃತ್ತದ ವರೆಗೆ ಸಾಗಿ ಮುಕ್ತಯವಾಯಿತು.ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ಮಲ್ಲನಾಯ್ಕ, ಜಿಲ್ಲಾ ಆಯುಷ್ ಆಧಿಕಾರಿ ಡಾ.ಯೋಗೇಂದ್ರ ಕುಮಾರ್, ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
=====