ಪದವಿ ಪರೀಕ್ಷೆ; ಆರು ವಿದ್ಯಾರ್ಥಿಗಳು ಡಿಬಾರ್

ಕಲಬುರಗಿ:ನ.17: ಗುಲ್ಬರ್ಗ ವಿಶ್ವವಿದ್ಯಾಲಯ ನಡೆಸುತ್ತಿರುವ ಪದವಿ ಪರೀಕ್ಷೆಯ ವೇಳೆ ಬುಧವಾರ ಮೂರು ಪ್ರತ್ಯೇಕ ಕಾಲೇಜುಗಳಲ್ಲಿ ನಕಲು ಮಾಡುತ್ತಿದ್ದ ಆರು ವಿದ್ಯಾರ್ಥಿಗಳನ್ನು ವಿವಿ ಕುಲಪತಿ ಪ್ರೊ.ದಯಾನಂದ ಅಗಸರ್ ಹಾಗೂ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೊ.ಜ್ಯೋತಿ ಧಮ್ಮ ಪ್ರಕಾಶ್ ಅವರು ಡಿಬಾರ್ ಮಾಡಿದ್ದಾರೆ.
ಜೇವರ್ಗಿ ಪಟ್ಟಣದ ಸಿದ್ಧಲಿಂಗ ಸ್ವಾಮಿಜಿ ಮಹಾವಿದ್ಯಾಲಯದಲ್ಲಿ ನಕಲು ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದ ಬಳಿಕ ಕಾಲೇಜಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸುವಂತೆ ಸಂಸ್ಥೆಯ ಪ್ರಾಂಶುಪಾಲರಿಗೆ ಕುಲಪತಿ ಪ್ರೊ.ಅಗಸರ್ ತಾಕೀತು ಮಾಡಿದ್ದಾರೆ.
ಇನ್ನೊಂದೆಡೆ, ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ನಕಲು ಮಾಡುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ್ದಾರೆ. ಜೊತೆಗೆ, ಕಲಬುರಗಿಯ ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ನಕಲು ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿ ಆದೇಶ ಹೊರಡಿಸಿದ್ದಾರೆ.