ಪದವಿ ಪರೀಕ್ಷೆಗಳ ಮೌಲ್ಯಮಾಪನ ಭತ್ಯೆ ಹೆಚ್ಚಿಸಲು ಆಗ್ರಹಿಸಿ ಅಧ್ಯಾಪಕರಿಂದ ಮೌಲ್ಯಮಾಪನ ಕೆಲ ಹೊತ್ತು ಬಹಿಷ್ಕರಿಸಿ ಪ್ರತಿಭಟನೆ

ಕಲಬುರಗಿ,ನ.30:ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಪದವಿ ಮಹಾವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರಿಗೆ ಮೌಲ್ಯಮಾಪನದ ದಿನಭತ್ಯೆ ಹೆಚ್ಚಳ ಮಾಡದಿರುವ ವಿಶ್ವವಿದ್ಯಾಲಯದ ಕ್ರಮವನ್ನು ಹೈದ್ರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಕಾರ್ಯಕರ್ತರು ಖಂಡಿಸಿ ಕೆಲಹೊತ್ತು ಮೌಲ್ಯಮಾಪನನ್ನು ಬಹಿಷ್ಕರಿಸಿ ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂದೆ ಶಾಂತಿಯುತ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ್ ಅಗಸರ್ ಮತ್ತು ಮೌಲ್ಯಮಾಪನ ಕುಲಸಚಿವ ಪ್ರೊ. ಸೊನಾರ್ ನಂದಪ್ಪ್ ಅವರಿಗೆ ಮನವಿ ಸಲ್ಲಿಸಿ, ಪ್ರಸ್ತುತ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿದ್ದು, ಬೆಲೆ ಏರಿಕೆಗೆ ಅನುಗುಣವಾಗಿ ಮೌಲ್ಯಮಾಪನ ದಿನಭತ್ಯೆಗಳನ್ನು ಹೆಚ್ಚಿಸದೇ ಇರುವುದು ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.
2015ರಿಂದ 2021ರವರೆಗೆ ಮೌಲ್ಯಮಾಪನದ ಯಾವುದೇ ಭತ್ಯೆಗಳನ್ನು ಹೆಚ್ಚಿಸಿರುವುದಿಲ್ಲ. ಆದರೆ ಬೆಲೆಗಳು ಮಾತ್ರ ನಿರಂತರವಾಗಿ ಹೆಚ್ಚಾಗುತ್ತಿವೆ. ಏಕರೂಪದ ಭತ್ಯೆನೀತಿ ಅನುಸಾರ ಹೆಚ್ಚಿಸಿರುವ ಭತ್ಯೆಗಳನ್ನು ಕಡಿತಗೊಳಿಸಿರುವುದು ಉನ್ನತ ಶಿಕ್ಷಣ ವಿರೋಧಿಯಾಗಿದೆ. ಇದರಿಂದಾಗಿ ಹಲವು ಅರ್ಹ ಹಾಗೂ ಅನುಭವಿ ಅಧ್ಯಾಪಕರು ಮೌಲ್ಯಮಾಪನ ಕಾರ್ಯದಿಂದ ದೂರ ಉಳಿಯುವಂತಾಗಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಲೇಜುಗಳ ಜೊತೆಗೆ ಬೇರೆ ಬೇರೆ ಜಿಲ್ಲೆಗಳಿಂದ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವ ಅಧ್ಯಾಪಕರ ಊಟ. ವಸತಿ, ಸಾರಿಗೆ, ಇನ್ನಿತರೆ ಖರ್ಚುಗಳನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹಾಗಾಗಿ ಅಧ್ಯಾಪಕರು ಖರ್ಚು-ವೆಚ್ಚಗಳನ್ನು ಸರಿದೂಗಿಸಿಕೊಳ್ಳಲು ತಕ್ಷಣವೇ ಮೌಲ್ಯಮಾಪಕರ ದಿನಭತ್ಯೆಗಳನ್ನು ಹೆಚ್ಚಿಸಬೇಕೆಂದು ಅವರು ಒತ್ತಾಯಿಸಿದರು.
ಇತ್ತೀಚಿಗೆ ಪ್ರಾರಂಭವಾದ ವಿಜಯಪೂರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಪ್ರತಿದಿನ ಮೌಲ್ಯಮಾಪನ ಮಾಡುವ ಅಧ್ಯಾಪಕರಿಗೆ ದಿನಭತ್ಯೆ 1300ರೂ.ಗಳನ್ನು ನೀಡುತ್ತಿದೆ. ಆದರೆ ಗುಲಬರ್ಗಾ ವಿಶ್ವವಿದ್ಯಾಲಯ ಮಾತ್ರ 1100ರೂ.ಗಳನ್ನು ನೀಡುತ್ತಿರುವುದು ಯಾವ ನ್ಯಾಯ?. ಈಗಾಗಲೇ ರಾಜ್ಯದ ಇತರೆ ವಿಶ್ವವಿದ್ಯಾಲಯಗಳು ಸಹ ಭತ್ಯೆ ಹೆಚ್ಚಿಸಿವೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ದಿನಭತ್ಯೆ 1300ರೂ.ಗಳು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ 1200ರೂ.ಗಳನ್ನು ನೀಡುತ್ತಿವೆ. ಹೀಗಾಗಿ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವ ಅಧ್ಯಾಪಕರಿಗೆ 1300 ರೂ.ಗಳಿಗಿಂತಲೂ ಹೆಚ್ಚು ದಿನಭತ್ಯೆಯನ್ನು ನೀಡಿ ಅಧ್ಯಾಪಕರಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸಿಕೊಡಲಾಗಿದೆ. ಆದರೆ ಗುಲಬರ್ಗಾ ವಿಶ್ವವಿದ್ಯಾಲಯ ಮಾತ್ರ ಅಧ್ಯಾಪಕರ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ದೂರಿದರು.
ಮೌಲ್ಯಮಾಪನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಸ್ಟೋಡಿಯನ್‍ಗೆ 600ರೂ.ಗಳು ಆದರೆ ಮೌಲ್ಯಮಾಪನ ಮಾಡುವ ಅಧ್ಯಾಪಕರಿಗೆ 1100 ರೂ.ಗಳು ಇದೆ. ಇಂತಹ ಹಣಕಾಸಿನ ತಾರತಮ್ಯವನ್ನು ತಕ್ಷಣವೇ ನಿವಾರಿಸಬೇಕು. ಈ ಸಂಬಂಧವಾಗಿ ಪ್ರೊ.ರಾಜಾಸಾಬ ನೇತೃತ್ವದ ಸಮಿತಿಯ ಶಿಫಾರಸ್ಸಿನ ಪ್ರಕಾರ ಬೆಲೆ ಏರಿಕೆಗೆ ಅನುಗುಣವಾಗಿ ವಿವಿಧ ಪರೀಕ್ಷೆ ಭತ್ಯೆಗಳು ಪ್ರತಿವರ್ಷವೂ ಪರಿಷ್ಕರಿಸಬೇಕೆಂಬ ನಿಯಮವಿದ್ದರೂ ಸಹ ಪರಿಷ್ಕರಿಸದೇ ಯಥಾವತ್ತಾಗಿ ಮುಂದುವರೆಸಿರುವುದು ನ್ಯಾಯೋಚಿತವಾದ ಕ್ರಮವಲ್ಲ ಎಂದು ಅವರು ಆಕ್ಷೇಪಿಸಿದರು.
ಆದ್ದರಿಂದ ಗುಲಬರ್ಗಾ ವಿಶ್ವವಿದ್ಯಾಲಯವೂ ಸಹ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆಯುತ್ತಿರುವ ಮೌಲ್ಯಮಾಪನದಿಂದಲೇ ಜಾರಿಗೆ ಬರುವಂತೆ ವಿವಿಧ ಮೌಲ್ಯಮಾಪಕರ ದಿನಭತ್ಯೆ ರೂ.1300, ಬಾಹ್ಯ ಹಿರಿಯ ಮೇಲ್ವಿಚಾರಕರಿಗೆ 1400ರೂ.ಗಳು, ಸ್ಕ್ವಾಡ್ ಸದಸ್ಯರಿಗೆ 1500ರೂ.ಗಳು, ಕಸ್ಟೋಡಿಯನ್‍ಗಳಿಗೆ 1600ರೂ.ಗಳು, ಪ್ರತಿ ಸ್ಕ್ರಿಪ್ಟ್‍ಗೆ 25ರೂ.ಗಳು, ಕ್ಲರ್ಕ್‍ಗೆ 800ರೂ.ಗಳು, ಸ್ಪೆಕ್ಟೆಟಮ್‍ಗೆ 500ರೂ.ಗಳು ಮುಂತಾದ ಮತ್ತಿತರೆ ಪರೀಕ್ಷಾ ಭತ್ಯೆಗಳನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯವು ವಿವಿಧ ಪರೀಕ್ಷಾ ಭತ್ಯೆಗಳು ನಿಗದಿಪಡಿಸುವಾಗ ಸಂವಿಧಾನವು ಕೊಡಮಾಡಿದ ಕನಿಷ್ಠ ಕೂಲಿ ಕಾಯ್ದೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ತತ್ವಗಳನ್ನು ಉಲ್ಲಂಘಿಸಲಾಗುತ್ತಿದೆ. ಆದ್ದರಿಂದ ಅಧ್ಯಾಪಕರ ನ್ಯಾಯಯುತ ಆರ್ಥಿಕ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಆಗ್ರಹಿಸಿದರು.
ಪದವಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತಾಗಲು ವಿವಿಧ ಪರೀಕ್ಷೆಗಳಿಗೆ ಸ್ಕ್ವಾಡ್ ತಂಡ ಕಡ್ಡಾಯವಾಗಿ ನೇಮಕ ಮಾಡುವಂತೆ, ಬೆಲೆ ಏರಿಕೆಗೆ ಅನುಗುಣವಾಗಿ ಎಲ್ಲ ಪ್ರಕಾರದ ಪರೀಕ್ಷಾ ಭತ್ಯೆಗಳು ಆಗಾಗ ಪರಿಷ್ಕರಿಸುವಂತೆ, ಪರೀಕ್ಷಾ ಕಾರ್ಯಗಳನ್ನು ಹಂಚಿಕೆ ಮಾಡುವಾಗ ಪರೀಕ್ಷಾ ಕೈಪಿಡಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಅವರು ಒತ್ತಾಯಿಸಿದರು.
ಸಂಘದ ವಿಭಾಗೀಯ ಅಧ್ಯಕ್ಷ ಡಾ. ಶರಣಪ್ಪ ಸೈದಾಪೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ. ಚಿನ್ನಾ ಆಶಪ್ಪ, ಡಾ. ಅರುಣಕುಮಾರ್ ನರೋಣಕರ್, ಡಾ. ಶರಣಪ್ಪ ಗುಂಡಗುರ್ತಿ, ಪ್ರೊ. ಶಿವಶರಣಪ್ಪ ಬಿರಾದರ್, ಗುಂಡಪ್ಪ ಸಿಂಗೆ, ಡಾ. ಸಿದ್ದಲಿಂಗ್ ರಾಠೋಡ್, ಡಾ. ದೇವಿದಾಸ್ ರಾಠೋಡ್, ಪ್ರೊ. ಸಿದ್ದಪ್ಪ ಡಿಗ್ಗಿ, ಡಾ. ಬಸವರಾಜ್ ಸಾದ್ಯಾಪೂರ್ ಪೊಲೀಸ್, ಚಂದ್ರಶೇಖರ್ ಅಕ್ಕರಕಿ, ಡಾ. ಜ್ಞಾನಮಿತ್ರ ಬೈರಾಮಡಗಿ, ನಲ್ಲಾರೆಡ್ಡಿ, ಪ್ರೊ. ರೇವಣಸಿದ್ದಪ್ಪ ನಿಂಗನಾಯಕ್, ಡಾ. ಹಣಮಂತ್ ದಾಸನ್, ಡಾ. ಸುಭಾಷ್ ದೊಡಮನಿ, ಡಾ. ಗಾಂಧೀಜಿ ಮೋಳಕೆರೆ ಇನ್ನಿತರ ಅಧ್ಯಾಪಕರು ಪಾಲ್ಗೊಂಡಿದ್ದರು.