ಪದವಿ ಪಠ್ಯದಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಇತಿಹಾಸ ಸೇರ್ಪಡೆಗೆ ಆಗ್ರಹ

ಕಲಬುರಗಿ,ಮಾ.31: ಪ್ರೊ. ಶಿವರಾಜ್ ಪಾಟೀಲ್ ಅವರು ರಚಿಸಿದ ಅವ್ವ ಹೇಳಿದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಇತಿಹಾಸ ಒಂದು ಮಹತ್ವದ ಕೃತಿಯಾಗಿದ್ದು, ಈ ಕೃತಿಯು ಗುಲಬರ್ಗಾ ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯ ಪುಸ್ತಕವಾಗಬೇಕು ಎಂದು ಶ್ರೀ ಶರಣಬಸವೇಶ್ವರ್ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಬಿ.ಡಿ. ಮಾಲಿಪಾಟೀಲ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಈ ಕೃತಿಯನ್ನು ಅಧಿಕೃತ ಇತಿಹಾಸ ದಾಖಲೀಕರಣವೆಂದು ಘೋಷಿಸಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಖರೀದಿಸಿ ಕಲ್ಯಾಣ ಕರ್ನಾಟಕದ ಎಲ್ಲ ಗ್ರಂಥಾಲಯಗಳಿಗೆ ಸರಬರಾಜು ಮಾಡುವ ಮೂಲಕ ಇತಿಹಾಸದ ಅರಿವು ಮೂಡಿಸಬೇಕು ಎಂದರು.
ಸ್ವಾತಂತ್ರ್ಯ ವೀರ ಯೋಧೆ ಲಿಂ. ಗಂಗಾಬಾಯಿ ದೇವರಾಜ್ ಮಾಲಿಪಾಟೀಲ್ ಪಟ್ಟಣ್ ಅವರು ಬದುಕಿದ್ದಾಗ ಹೇಳಿದ 1947, ಆಗಸ್ಟ್ 18ರಿಂದ 1948ರ ಸೆಪ್ಟೆಂಬರ್ 17ರವರೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಿಮೋಚನೆಗಾಗಿ ನಡೆದ ಚಳುವಳಿಯ ಇತಿಹಾಸ ಈ ಕೃತಿಯಲ್ಲಿದೆ. 1948ರಿಂದ ಇದುವರೆಗೆ ಏನೇನು ನಡೆದಿದೆ ಎಂಬುದರ ದಾಖಲೀಕರಣಗೊಂಡಿದೆ. ಹೈದ್ರಾಬಾದ್ ಕರ್ನಾಟಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದೆ ಎಂದು ಅವರು ಹೇಳಿದರು.
ಹೈದ್ರಾಬಾದ್ ಕರ್ನಾಟಕ ಇತಿಹಾಸ ರಚನಾ ಸಮಿತಿ ರಚನೆಗೊಂಡು ಬಹು ವರ್ಷಗಳು ಗತಿಸಿದರೂ ಒಂದು ಇತಿಹಾಸ ಕೃತಿ ಇದುವರೆಗೂ ಬರೆಯದೇ ಇರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ಹೊರಹಾಕಿದ ಅವರು, ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಹೈದ್ರಾಬಾದ್ ಕರ್ನಾಟಕ ಇತಿಹಾಸ ರಚನೆಗಾಗಿ ಅಧ್ಯಯನ ಪೀಠ ಸ್ಥಾಪನೆಯಾದರೂ ಇದುವರೆಗೆ ರಚನಾತ್ಮಕ ಕಾರ್ಯ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರೊ. ಶಿವರಾಜ್ ಪಾಟೀಲ್ ಅವರು ಉಪಸ್ಥಿತರಿದ್ದರು.