ಪದವಿ ಕಾಲೇಜು ಅಧ್ಯಾಪಕರಿಗೆ ಬೇಸಿಗೆ ರಜೆ ನೀಡಲು ಆಗ್ರಹಿಸಿ ಮನವಿ

ಕಲಬುರಗಿ,ಮಾ.15:ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಸರಕಾರಿ,ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜು ಅಧ್ಯಾಪಕರಿಗೆ ಬೇಸಿಗೆ ರಜೆ ನೀಡಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಲ್ಲಿ ಆಗ್ರಹಿಸುತ್ತದೆ. ಕೊವಿಡೋತ್ತರ ಕಾಲಘಟ್ಟದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಲವು ವ್ಯತ್ಯಾಸಗಳಾಗಿವೆ. ಆದರೆ ಈ ಶೈಕ್ಷಣಿಕ ವ್ಯವ್ಯಸ್ಥೆಯಲ್ಲಿ ಉಂಟಾದ ವ್ಯತ್ಯಾಸಗಳನ್ನು ಸರಿದೂಗಿಸಿಕೊಳ್ಳಲು ವಿಶ್ವವಿದ್ಯಾಲಯವು ಕೇವಲ ಅಧ್ಯಾಪಕರನ್ನೆ ಮಾತ್ರ ನಿರಂತರವಾಗಿ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಇದರಿಂದಾಗಿ ಅಧ್ಯಾಪಕರ ಶೈಕ್ಷಣಿಕ ಸಾಮಥ್ರ್ಯವು ತೀವ್ರವಾಗಿ ಕುಂಟಿತಗೊಳ್ಳುತ್ತಿದೆ.ಅಂದರೆ ಮಧ್ಯಂತರ ರಜೆ ಆಗಿರಬಹುದು ಅಥವಾ ಬೇಸಿಗೆ ರಜೆ ಆಗಿರಬಹುದು ಯಾವುದೇ ಪ್ರಕಾರದ ರಜೆಗಳು ಇಲ್ಲದಂತಾಗಿ ಅಧ್ಯಾಪಕರು ಮಾನಸಿಕ ಒತ್ತಡದಲ್ಲಿದ್ದಾರೆ. ಇದರಿಂದಾಗಿ ಅಧ್ಯಾಪಕರ ಬೋಧನಾ ಸಾಮಥ್ರ್ಯ ಮತ್ತು ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈಗಾಗಲೇ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳು ತಮ್ಮ ಅಧ್ಯಾಪಕರಿಗೆ ಮಧ್ಯಂತರ ಹಾಗೂ ಬೇಸಿಗೆ ರಜೆಗಳನ್ನು ಆಯಾ ಸಮೆಸ್ಟರ್‍ಗಳಿಗೆ ಕೊಡಲಾಗಿದೆ.
ಆದರೆ ಗುಲಬರ್ಗಾ ವಿಶ್ವವಿದ್ಯಾಲಯವು ಮಾತ್ರ ಅಧ್ಯಾಪಕರಿಗೆ ಯಾವುದೇ ಪ್ರಕಾರದ ರಜೆ ಕೊಡದಿರುವುದು ನ್ಯಾಯಸಮ್ಮತವಾದ ಕ್ರಮವಾಗುವದಿಲ್ಲ. ಯಾವ ರೀತಿಯಾಗಿ ಬೇರೆ ವಿಶ್ವವಿದ್ಯಾಲಯಗಳು ತನ್ನ ಅಧ್ಯಾಪಕರಿಗೆ ಶೈಕ್ಷಣಿಕ ರಜೆಗಳನ್ನು ನೀಡಿದೆಯೋ ಅದೇ ರೀತಿಯಾಗಿ ಗುಲಬರ್ಗಾ ವಿಶ್ವವಿದ್ಯಾಲಯವು ಸಹ ಪದವಿ ಕಾಲೇಜು ಅಧ್ಯಾಪಕರಿಗೆ ಬೇಸಿಗೆ ರಜೆ ಮಂಜೂರು ಮಾಡಬೇಕೆಂದು ಅಧ್ಯಾಪಕರ ಸಂಘವು ಒತ್ತಾಯಿಸುತ್ತದೆ. ಇಲ್ಲವಾದರೆ ಕಾಲೇಜು ಅಧ್ಯಾಪಕರಿಗೆ ರಜೆಯ ಅವಧಿಯ ಅಂತರವನ್ನು ಸರಿದೂಗಿಸಿಕೊಳ್ಳಲು ತಕ್ಷಣವೇ ‘ಗಳಿಕೆ ರಜೆ’ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ವಿಶ್ವವಿದ್ಯಾಲಯವು ಕ್ಯಾಲೆಂಡರ್ ಆಫ್ ಈವ್ಹೆಂಟ್‍ನ್ನು ಸಿದ್ದಪಡಿಸುವಾಗ ಕಡ್ಡಾಯವಾಗಿ ರಜೆ ಅವಧಿಯನ್ನು ನಿಗಧಿಗೋಳಿಸಬೇಕು. ಆದ್ದರಿಂದ ಈ ಎಲ್ಲಾ ಶೈಕ್ಷಣಿಕ ಪ್ರತಿಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಾಪಕರ ಶೈಕ್ಷಣಿಕ ಸಾಮಥ್ರ್ಯ ಹೆಚ್ಚಿಸಲು ಮತ್ತು ಬೋಧನಾ ದಕ್ಷತೆಯನ್ನು ವೃದ್ದಿಸಲು ಬೇಸಿಗೆ ರಜೆ ಮಂಜೂರು ಮಾಡಿ ಪದವಿ ಕಾಲೇಜು ಅಧ್ಯಾಪಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾನ್ಯ ಕುಲಪತಿಗಳಲ್ಲಿ ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತದೆ. ಅಧ್ಯಾಪಕರ ಸಂಘದ ವಿಭಾಗೀಯ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ ಅವರ ನೇತೃತ್ವದಲ್ಲಿ ನಿಯೋಗದ ಮೂಲಕ ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ದಯಾನಂದ ಅಗಸರ್ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳಾದ ಡಾ.ರವಿಂದ್ರಕುಮಾರ ಭಂಡಾರಿ, ಡಾ.ಸಂತೋಷಕುಮಾರ ಕಟಕೆ, ಪ್ರೊ ಅನೀಲಕುಮಾರ ಮಂದೋಲಕರ್,ಡಾ.ಸುರೇಖಾ ಎಂ, ಡಾ.ಟೀಕಪ್ಪ ಎಂ. ಇನ್ನಿತರರು ಉಪಸ್ಥಿತರಿದ್ದರು.