ಪದವಿ ಕಾಲೇಜುಗಳಲ್ಲಿ ಯುವ ಸಬಲೀಕರಣ ಅಭಿಯಾನ

ತುಮಕೂರು, ಜು. ೩೦- ಜಿಲ್ಲೆಯ ೧೦ ತಾಲ್ಲೂಕುಗಳ ಎಲ್ಲ ಪದವಿ ಕಾಲೇಜುಗಳಲ್ಲಿ ಪದವಿ ನಂತರ ಮುಂದೇನು ಎಂಬುದರ ಬಗ್ಗೆ ಕಾರ್ಯಾಗಾರದ ಮೂಲಕ ಯುವ ಸಬಲೀಕರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಾಲಪ್ಪ ಪ್ರತಿಷ್ಠಾನ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ಯುವಸಬಲೀಕರಣ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಪ್ರಥಮ ದರ್ಜೆ ಕಾಲೇಜುಗಳಾದ ಬಿ.ಎ., ಬಿ.ಎಸ್ಸಿ, ಬಿ.ಕಾಂ., ಬಿಬಿಎ, ಬಿಸಿಎ, ಪಾಲಿಟೆಕ್ನಿಕ್‌ಗಳು, ಐಟಿಐ ಸೇರಿದಂತೆ ಇನ್ನಿತರೆ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೋರ್ಸ್‌ಗಳು ಮುಗಿದ ನಂತರ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಅವರಿಗೆ ಅರಿವು ಮೂಡಿಸುವ ಮೂಲಕ ಸಹಾಯ ಹಸ್ತವನ್ನು ಚಾಚಲು ಹೊರಟಿರುವುದಾಗಿ ತಿಳಿಸಿದರು.
ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿ ಬಂದಿರುತ್ತಾರೆ. ಅವರಿಗೆ ಎಲ್ಲೋ ಒಂದು ಕಡೆ ಸಂಕೋಚದ ಮನೋಭಾವವಿರುತ್ತದೆ. ಅವರಿಗಿರುವ ಧೈರ್ಯ, ಜ್ಞಾಪಕಶಕ್ತಿ ನಗರ ಪ್ರದೇಶದವರನ್ನು ಮೀರಿಸುತ್ತದೆ. ಇಲ್ಲಿಯವರೆಗೂ ನಾವು ಕಂಡಂತೆ ಸಾಧಕರೆಲ್ಲರೂ ಗ್ರಾಮಾಂತರ ಪ್ರದೇಶದವರೇ ಆಗಿದ್ದಾರೆ. ಈ ವಿಷಯವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ, ಅವರಿಗೆ ಸ್ಪೂರ್ತಿ ತುಂಬಿ, ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಪ್ರತಿ ಪದವಿ ಕಾಲೇಜುಗಳಲ್ಲೂ ಇಂತಹ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ನಮ್ಮ ಜತೆಗೆ ಬೇರೆ ಬೇರೆ ತಜ್ಞರು ಜೊತೆಗಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಸೇನೆಗೆ ಸೇರ ಬಯಸುವವರು, ಏರ್‌ಫೋರ್ಸ್, ನೇವಿ, ಆರ್ಮಿ, ಬ್ಯಾಂಕಿಂಗ್ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗ್ಗೆ, ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ಹೀಗೆ ವಿವಿಧ ರೀತಿಯಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಲೀಲಾವತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪದವಿ ಪಡೆದು ಮುಂದೇನು ಎಂಬ ಯೋಚನೆ ಇದ್ದೇ ಇರುತ್ತದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇಂತಹ ಕಾರ್ಯಾಗಾರ ಪ್ರಯೋಜನಕಾರಿ ಎಂದರು.
ವಿದೇಶಿ ವ್ಯಾಸಂಗ ಮಾರ್ಗದರ್ಶಕರಾದ ಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ಪದವಿ ನಂತರ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವವರಿಗೆ ಸರ್ಕಾರದಿಂದ ಶೈಕ್ಷಣಿಕ ಸಾಲ ದೊರೆಯಲಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಉನ್ನತ ವಿದ್ಯಾಭ್ಯಾಸ ಮುಂದುವರೆಸಬಹುದು ಎಂದು ತಿಳಿಸಿದರು.
ಜಿಲ್ಲಾ ಉದ್ಯೋಗ ವಿನಿಮಿಯ ಕೇಂದ್ರದ ಅಧಿಕಾರಿ ನಾಗರಾಜು ಮಾತನಾಡಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮೋ ಉತ್ತೀರ್ಣ ಅಥವಾ ಅನುತ್ತೀರ್ಣರಾದ ನಿರುದ್ಯೋಗಿಗಳು ನಮ್ಮ ಇಲಾಖೆಗೆ ಭೇಟಿ ನೀಡಿ ಉಚಿತವಾಗಿ ನೊಂದಾಯಿಸಿಕೊಳ್ಳಬಹುದು ಎಂದರು.
ನೊಂದಾಯಿಸಲು ಮೂಲ ಅಂಕಪಟ್ಟಿಗಳು, ಜಾತಿ ಮತ್ತು ವರಮಾನ ಪ್ರಮಾಣ ಪತ್ರ, ಆಧಾರ್‌ಕಾರ್ಡ್, ಎರಡು ಭಾವಚಿತ್ರಗಳನ್ನು ತಂದರೆ ಉಚಿತವಾಗಿ ನೊಂದಾಯಿಸಿಕೊಳ್ಳಬಹುದು. ನೊಂದಾಯಿಸಿದ ಅಭ್ಯರ್ಥಿಗಳಿಗೆ ಸರ್ಕಾರಿ ಅಥವಾ ಖಾಸಗೀ ಸಂಸ್ಥೆಗಳೊಡಗೂಡಿ ಉದ್ಯೋಗವಕಾಶಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಯುವಸಬಲೀಕರಣ ಅಭಿಯಾನದಲ್ಲಿ ಭಾರತ ಸರ್ಕಾರದ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್‌ನ ನಿವೃತ್ತ ನಿರ್ದೇಶಕ ಬದರಿನಾಥ್, ವಾಯುಸೇನೆ ನಿವೃತ್ತ ಅಧಿಕಾರಿ ಸ್ಕ್ವಾಡರ್ ಲೀಡರ್ ಭಾಸ್ಕರ್, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ದಿಲೀಪ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ ನಿವೃತ್ತ ಅಧಿಕಾರಿ ಬದರಿನಾಥ್, ಸ್ಪರ್ಧಾತ್ಮಕ ಪರೀಕ್ಷೆ ಸಲಹೆಗಾರ ದಿಲೀಪ್‌ಕುಮಾರ್, ವಾಯುಸೇನೆ ನಿವೃತ್ತ ಅಧಿಕಾರಿ ಸ್ಕ್ಚಾಡರ್ ಲೀಡರ್ ಭಾಸ್ಕರ್, ವಿದೇಶಿ ವ್ಯಾಸಂಗ ಮಾರ್ಗದರ್ಶಕ ಗಣೇಶ್, ಜಿಲ್ಲಾ ಉದ್ಯೋಗ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ನಾಗರಾಜು, ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಶಿಕ್ಷಕ ಮನೋಜ್ ಮತ್ತಿತರರು ಉಪಸ್ಥಿತರಿದ್ದರು.