
ಕೋಲಾರ,ಆ,೨೯:ಜಿಲ್ಲೆಯಲ್ಲಿ ನಡೆದ ೭೭ ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ನಡೆಸಿದ ಪಥಸಂಚಲನದ ಶಾಲಾ ಹಂತದ ಸಮವಸ್ತ್ರ ವಿಭಾಗದಲ್ಲಿ ಪ್ರಥಮ ಬಹುಮಾನ ಗೆದ್ದುಕೊಂಡಿರುವ ಎಇಎಸ್ ಭಾರತಸೇವಾದಳ ತಂಡವನ್ನು ಸೇವಾದಳ ಜಿಲ್ಲಾ ಮತ್ತು ತಾಲೂಕು ಸಮಿತಿಗಳಿಂದ ಅಭಿನಂದಿಸಲಾಯಿತು.
ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತಸೇವಾದಳ ತಂಡದ ಎಲ್ಲಾ ಸದಸ್ಯ ವಿದ್ಯಾರ್ಥಿಗಳಿಗೆ ಭಾರತ ಸೇವಾದಳವತಿಯಿಂದ ಪ್ರಮಾಣ ಪತ್ರಗಳನ್ನು ವಿತರಿಸಿ ಶಾಲೆಯ ಎಲ್ಲಾ ಮಕ್ಕಳಿಗೂ ಸಿಹಿ ಹಂಚಿಕೆ ಮಾಡಲಾಯಿತು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸೇವೆಗಾಗಿ ಬಾಳು ಧ್ಯೇಯದೊಂದಿಗೆ ರಾಷ್ಟ್ರಧ್ವಜ, ಗೀತೆಗಳ ಕುರಿತು ಅರಿವು ತರಬೇತಿ ನೀಡುತ್ತಿರುವ ಭಾರತ ಸೇವಾದಳದ ಶಿಸ್ತಿನ ಸಿಪಾಯಿಗಳಾಗಿ ಪಥಸಂಚಲನದಲ್ಲಿ ಪ್ರಥಮ ಬಹುಮಾನ ಗೆದ್ದಿರುವುದು ಶ್ಲಾಘನೀಯ ಇದು ಇತರೇ ವಿದ್ಯಾರ್ಥಿಗಳಿಗೂ ಸ್ಪೂರ್ತಿ ಪ್ರೇರಣೆಯಾಗಲಿ ಎಂದರು.
ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿಸೇವಾದಳ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗುವಂತೆ ಮಾಡುತ್ತಿದ್ದು, ಪಥಸಂಚಲನದಲ್ಲಿ ಮೊದಲ ಬಹುಮಾನ ಪಡೆದುಕೊಳ್ಳಲು ಸಾಧ್ಯವಾಯಿತೆಂದರು.
ಖೋಖೋ ಪ್ರಶಸ್ತಿ
ಇದೇ ಸಂದರ್ಭದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟಗಳಲ್ಲಿ ಎಇಎಸ್ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರ ನಾಲ್ಕು ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿ, ವಿಜೇತ ತಂಡಗಳ ನಾಯಕರನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವಂತೆ ಶುಭ ಕೋರಲಾಯಿತು.
ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ಖಜಾಂಚಿ ನಾಗರಾಜ್, ತಾಲೂಕು ಅಧ್ಯಕ್ಷ ಶ್ರೀರಾಮ್, ಪದಾಕಾರಿಗಳಾದ ಅಪ್ಪಿ ನಾರಾಯಣಸ್ವಾಮಿ, ವಿ.ಪಿ.ಸೋಮಶೇಖರ್, ಚಾಮುಂಡೇಶ್ವರಿದೇವಿ, ರಾಜೇಶ್‌ಸಿಂಗ್, ಎಇಎಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ, ದೈಹಿಕತ ಶಿಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು.