‘ಪತ್ರಿಕೋದ್ಯಮ ಮತ್ತು ರಂಗಭೂಮಿ’ ಶಿಕ್ಷಣಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಭಾಕರ ಜೋಷಿ ಮನವಿ

ಕಲಬುರಗಿ;ಮಾ.30: ಪತ್ರಿಕೋದ್ಯಮ ಮತ್ತು ರಂಗಭೂಮಿ ಪ್ರತ್ಯೆಕ ವಿಶ್ವವಿದ್ಯಾಲಯ ಹೊಂದುವಷ್ಟು ಆಳವಾದ ಜ್ಞಾನದ ವ್ಯಾಪ್ತಿಯನ್ನು ಹೊಂದಿವೆ. ಸಾರ್ವಜನಿಕರ ಮೇಲೆ ಗಾಢವಾದ ಪ್ರಭಾವ ಬೀರುವದರ ಜೊತೆಗೆ ರಾಷ್ಟ್ರದ ದಿಶೆಯನ್ನು ಬದಲಿಸುವಲ್ಲಿ ಇವೆರಡು ಪ್ರಮುಖ ಪಾತ್ರನಿರ್ವಹಿಸುತ್ತಿವೆ. ಹೀಗಾಗಿ ಪತ್ರಿಕೋದ್ಯಮ ಮತ್ತು ರಂಗಭೂಮಿಗೆ ಶಿಕ್ಷಣಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಎಂದು ಕಲಬುರಗಿ ರಂಗಾಯಣದ ನಿರ್ದೇಶಕರಾದ ಶ್ರೀ ಪ್ರಭಾಕರ್ ಜೋಶಿ ಮನವಿ ಮಾಡಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪತ್ರಿಕೋದ್ಯಮ ಮತ್ತು ರಂಗಭೂಮಿ ವಿಷಯ ಕುರಿತು ಮಂಗಳವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪತ್ರಿಕೋದ್ಯಮ ಮತ್ತು ರಂಗಭೂಮಿ ಅಘೋಷಿತ ವಿಶ್ವವಿದ್ಯಾಲಯಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಸಂಗೀತ, ಜಾನಪದ ಕ್ಷೇತ್ರಗಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ, ಅದೇ ರೀತಿಯ ಸ್ಥಾನಮಾನ ಪತ್ರಿಕೋದ್ಯಮ ಮತ್ತು ರಂಗಭೂಮಿ ಕ್ಷೇತ್ರಕ್ಕೂ ದೊರೆಯಬೇಕು ಎಂದರು.

ದೇಶ ಬದಲಾವಣೆಯತ್ತ ಸಾಗಲು ಐತಿಹಾಸಿಕವಾಗಿ ರಂಗಭೂಮಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ದೇಶಕ್ಕೆ ಸಾಕ್ಷಿಯಾದ ಅನೇಕ ಸಾಮಾಜಿಕ ಚಳುವಳಿಗಳನ್ನು ನಾಟಕದ ರೂಪ ಪಡೆದಿರುವುದರಿಂದ ಇನ್ನೂ ಜೀವಂತಗೊಳಿಸಲು ಸಾಧ್ಯವಾಗಿದೆ. ಅದೇ ರೀತಿ ನಮ್ಮ ಪುರ್ವಜರು ತಮ್ಮ ಸಂದೇಶವನ್ನು ಸಾರಲು ರಂಗಭೂಮಿಯನ್ನು ಪ್ರಬಲ ಸಾಧನವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಹೇಳಿದರು.

ಜೋಶಿ ಮಾತುಗಳನ್ನು ಮುಂದುವರೆಸುತ್ತಾ, ನಾಟಕ ಮತ್ತು ಬೀದಿ ನಾಟಕಗಳ ಮೂಲಕ ರವಾನೆಯಾಗುವ ಸಂದೇಶಗಳು, ತರಗತಿಯಲ್ಲಿನ ಬೋಧನೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಸುವಲ್ಲಿ, ರಂಗಭೂಮಿ ಕ್ಷೇತ್ರ ಹೆಚ್ಚು ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಚಿತ್ರಮಂದಿರ ಮತ್ತು ದೂರದರ್ಶನ ಹೀಗೆ ಹತ್ತು ಹಲವಾರು ಕಾರಣಗಳಿಂದಾಗಿ, ರಂಗಭೂಮಿ ಪ್ರಬಲ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವಂತ ಪ್ರಾಬಲ್ಯತೆಯನ್ನು ಕಳೆದುಕೊಂಡಿದೆ. ರಂಗಭೂಮಿ ಮತ್ತು ನಾಟಕವನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ ಎಂದರು.

ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಮುಂತಾದವುಗಳನ್ನು ಒಳಗೊಂಡಂತೆ ರಂಗಭೂಮಿಯ ಅನೇಕ ವಿಷಯಗಳ ಬಗ್ಗೆ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಇದು ಮುದ್ರಣ ಮಾಧ್ಯಮ ಮತ್ತು ವಿದ್ಯನ್ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ವೃತ್ತಿಜೀವನದಲ್ಲಿ ತುಂಬಾ ಸಹಕಾರಿಯಾಗುತ್ತದೆ ಎಂದರು.

ರಂಗಭೂಮಿ ಕ್ಷೇತ್ರದಲ್ಲಿ ವೃತ್ತಿಪರ ಮತ್ತು ವಿಶೇಷ ಬರಹಗಾರರ ತೀವ್ರ ಕೊರತೆಯಿದೆ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ರಂಗಾಯಣ ಸಿದ್ಧವಿದೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ರಂಗಭೂಮಿಯ ಬಗ್ಗೆ ವಿಶೇಷ ಕಥೆಗಳನ್ನು ಬರೆಯುವಲ್ಲಿ ಹಾಗೂ ಪರಿಣತಿ ಪಡೆಯುವಲ್ಲಿ ಈ ಸುವರ್ಣಾವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಶ್ರೀ ಜೋಶಿ ತಿಳಿಸಿದರು.

ವಿವಿ ಕುಲಸಚಿವ ಡಾ. ಅನೀಲಕುಮಾರ ಜಿ. ಬಿಡವೆ ಮಾತನಾಡಿ, ರಂಗಭೂಮಿ ಎಂಬ ವಿಷಯವನ್ನು ಪತ್ರಿಕೋದ್ಯಮದ ಪಠ್ಯಕ್ರಮಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನ ಮುಂಬರುವ ದಿನಗಳಲ್ಲಿ ಮಾಡಲಾಗುತ್ತದೆ. ‘ರಂಗಭೂಮಿ ಮತ್ತು ಪತ್ರಿಕೋದ್ಯಮ’ ವಿಷಯದ ಈ ವಿಚಾರ ಸಂಕಿರಣ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿದೆ. ಹಲವು ವಿಷಯಗಳ ಮಧ್ಯೆ ಇದ್ದ ಗೊಡೆಗಳನ್ನು ಒಡೆದು, ಎಲ್ಲ ಕ್ಷೇತ್ರಗಳ ಕಲಿಕೆಯನ್ನು ಒಗ್ಗೂಡಿಸುವ ಪ್ರಯತ್ನವೇ ಶಿಕ್ಷಣ ನೀತಿಯು ಉದ್ದೇಶವಾಗಿದೆ ಎಂದು ತಿಳಿಸುತ್ತಾ, ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡೀನ್‍ರಾದ ಶ್ರೀ ಟಿ.ವಿ ಶಿವಾನಂದನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ರಂಗಭೂಮಿಯ ವರದಿಗಾರಿಕೆ ಹಾಗೂ ನಾಟಕ ಮತ್ತು ಚಲನಚಿತ್ರದ ವಿಮರ್ಶೆ ಬರವಣಿಗೆಯ ಕುರಿತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ತರಬೇತಿಯ ಅವಶ್ಯವಿದೆ. ತಮ್ಮ ವಿದ್ಯಾರ್ಥಿಗಳಿಗೆ ರಂಗಭೂಮಿ ವರದಿಗಾರಿಕೆಯ ಬಗ್ಗೆ ತಿಳಿಸಿಕೊಡುವುದಾಗಿ ಕೇಳಿಕೊಂಡರು. ಕಲಬುರಗಿಯ ರಂಗಾಯಣ ಸಂಸ್ಥೆಯೊಂದಿಗೆ ವಿಶ್ವವಿದ್ಯಾನಿಲಯವು ಅತೀ ಶೀಘ್ರದಲ್ಲಿ ತಿಳುವಳಿಕೆಯ ಒಪ್ಪಂದ (ಎಂಒಯು) ಮಾಡಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಇಂಗ್ಲೀμï ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಜಿ ಡೊಳ್ಳೇಗೌಡರ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಂ ಎಸ್ ಪಾಟೀಲ್ ಸೇರಿದಂತೆ ಕನ್ನಡ, ಆಂಗ್ಲ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಡಾ. ಸಾರಿಕಾದೇವಿ ಕಾಳಗಿ ಕಾರ್ಯಕ್ರಮ ನಿರೂಪಿಸಿದರು. ಡಾ. ಸುನಿತಾ ಪಾಟೀಲ ಸ್ವಾಗತಿಸಿದರು. ಪ್ರೊ. ಕೀರ್ತಿ ದೇವಿದಾಸ ಪ್ರಾರ್ಥನೆ ಗೀತೆ ಹಾಡಿದರು. ಪ್ರೊ. ನಿರ್ಮಲಾ ದೊರೆ. ವಂದಿಸಿದರು.