ಪತ್ರಿಕೋದ್ಯಮದ ಉನ್ನತ ಮೌಲ್ಯಗಳು ಮತ್ತು ನೈತಿಕತೆಯನ್ನು ಎತ್ತಿಹಿಡಿಯಿರಿ: ಶಿವಾನಂದ್ ತಗಡೂರು

ಕಲಬುರಗಿ,ಏ.16:ಪತ್ರಿಕೋದ್ಯಮದ ಉನ್ನತ ಮೌಲ್ಯಗಳು ಮತ್ತು ನೈತಿಕತೆಯನ್ನು ಎತ್ತಿ ಹಿಡಿಯುವಂತೆ ಉದಯೋನ್ಮುಖ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.

ಶರಣಬಸವ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಭಾನುವಾರ ಆಯೋಜಿಸಿದ್ದ “ಪತ್ರಕರ್ತರು ಸಮಾಜಕ್ಕೆ ಮಾದರಿ” ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕೀರಣದಲ್ಲಿ ಮಾತನಾಡಿದ ತಗಡೂರು ಅವರು, ಸಮಾಜದಲ್ಲಿ ಮೌಲ್ಯಗಳು ಮತ್ತು ನೈತಿಕತೆಗಳು ಬಲಿಪಶುಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರ ಮತ್ತು ಈ ಪ್ರವೃತ್ತಿಯನ್ನು ಪ್ರವೇಶಿಸುವ ಉದಯೋನ್ಮುಖ ಪತ್ರಕರ್ತರು ಇದನ್ನು ಹಿಮ್ಮೆಟ್ಟಿಸುವ ಅಗತ್ಯವಿದೆ ಎಂದರು.

ದೀನದಲಿತರು ಹಾಗೂ ಧ್ವನಿಯಿಲ್ಲದವರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಇಂದಿನ ಪತ್ರಕರ್ತರ ಮೇಲಿದೆ. ಪತ್ರಕರ್ತರು ಧ್ವನಿಯಿಲ್ಲದವರ ಧ್ವನಿಯಾಗಬೇಕು ಎಂದು ಹೇಳಿದ ಅವರು, ತುಳಿತಕ್ಕೊಳಗಾದ ಸಮುದಾಯಗಳು ಮತ್ತು ಜನರ ಹಕ್ಕುಗಳನ್ನು ಎತ್ತಿ ಹಿಡಿಯಲು ಪತ್ರಕರ್ತರು ನಿರ್ಭೀತರಾಗಿರಬೇಕು ಎಂದು ಕಿವಿಮಾತನ್ನು ಹೇಳಿದರು.

ಶ್ರೀ ತಗಡೂರ್ ಅವರು ವಿದ್ಯುನ್ಮಾನ ಮಾಧ್ಯಮದ ಒಂದು ವಿಭಾಗವನ್ನು ತೀವ್ರವಾಗಿ ಟೀಕಿಸಿದರು ಹಾಗೂ ಅವರ ದುರಾಸೆಯಿಂದ ಹಲವಾರು ಕುಟುಂಬಗಳ ಜೀವನವನ್ನು ಒಡೆಯುವ “ಬ್ರೇಕಿಂಗ್ ನ್ಯೂಸ್” ಮತ್ತು ಕೆಲವು ಟೆಲಿವಿಷನ್ ಚಾನೆಲ್‍ಗಳಲ್ಲಿ ವ್ಯಕ್ತಪಡಿಸಿದ ಮಾತುಗಳು ಮತ್ತು ಕಾರ್ಯಗಳು, ಪತ್ರಕರ್ತರು ಅಭ್ಯಾಸ ಮಾಡುವ ವಯೋಮಾನದ ನೀತಿ ಮತ್ತು ಮೌಲ್ಯಗಳಿಗೆ ವಿರುದ್ಧವಾಗಿವೆ. ಈ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಜನರು ಮುದ್ರಣ ಮಾಧ್ಯಮವನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ ಎಂದು ಪರಿಗಣಿಸಿದ್ದಾರೆ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಯಶಸ್ವಿ ಪತ್ರಕರ್ತರಾಗಲು ತಮ್ಮ ಬರವಣಿಗೆ ಕೌಶಲ್ಯ, ವಾಕ್ಯ ರಚನೆ ಮತ್ತು ವ್ಯಾಕರಣವನ್ನು ಸುಧಾರಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಕಿವಿಮಾತನ್ನು ಹೇಳಿದರು.

ಪ್ರಾಮಾಣಿಕ ಮತ್ತು ಆದರ್ಶ ಪತ್ರಕರ್ತರು ಜನರ ಧ್ವನಿಯಾಗುತ್ತಾರೆ ಮತ್ತು ತಪ್ಪು ಮಾಡುವವರು, ರಾಜಕಾರಣಿಗಳಲ್ಲಿ ಭಯವನ್ನು ತುಂಬುತ್ತಾರೆ. ಪತ್ರಕರ್ತರು ತಮ್ಮ ಕಾರ್ಯವೈಖರಿಯಿಂದ ಸಮಾಜಕ್ಕೆ ಮಾದರಿಯಾಗಬೇಕು ಮತ್ತು ತಮ್ಮ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಪ್ರಚೋದನೆಗಳಿಗೆ ಬಲಿಯಾಗಬಾರದು ಎಂದು ಶ್ರೀ ತಗಡೂರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಕಲಬುರಗಿ ಘಟಕದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಡೀನ್ ಟಿ ವಿ ಶಿವಾನಂದನ್ ಅತಿಥಿಗಳನ್ನು ಪರಿಚಯಿಸಿದರು ಮತ್ತು ಪೆÇ್ರ ಸಾರಿಕಾದೇವಿ ಕಾಳಗಿ ಸ್ವಾಗತಿಸಿದರು. ಅಂತಿಮ ವರ್ಷದ ವಿದ್ಯಾರ್ಥಿನಿ ಅಶ್ವಿನಿ ಹೊಸಮನಿ ವಂದಿಸಿದರು.

ಇಂಗ್ಲೀಷ ವಿಭಾಗದ ಪ್ರೊ. ಎನ್. ಎಸ್. ಪಾಟೀಲ, ಪ್ರೊ. ಎಲೆನೋರೆ ಗೀತಮಾಲಾ, ಪ್ರೊ. ಕಾವೇರಿ ಕಾಮಶೆಟ್ಟಿ ಸೇರಿದಂತೆ ಕನ್ನಡ ವಿಭಾಗದ ಪ್ರಾಧ್ಯಾಪಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.