ಪತ್ರಿಕೋದ್ಯಮದಿಂದ ಸಮಾಜದ ಅಬ್ಯುದಯ ಸಾಧ್ಯ : ಪ್ರೊ. ರಾಜನಾಳ್ಕರ್ ಲಕ್ಷ್ಮಣ

ಕಲಬುರಗಿ,ಜು.1: ಪತ್ರಿಕೋದ್ಯಮ ಇಂದು ಹೆಚ್ಚು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಿದೆ. ನಾಗರೀಕ ಸಮಾಜದಲ್ಲಿ ಜಾಗೃತಿ ಮತ್ತು ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಪತ್ರಿಕೆಗಳು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಸಮಾಜದ ಅಬ್ಯುದಯ ಸಾಧ್ಯವಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಬಾರ ಕುಲಸಚಿವ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಕನ್ನಡ ಪತ್ರಿಕೋದ್ಯಮ ದಿನಾಚರಣೆ ನಿಮಿತ್ತ ಆಯೋಜಿಸಿದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಮಾಧ್ಯಮ ಕ್ಷೇತ್ರ ಪ್ರಬಲವಾಗಿ ಬೆಳೆದಿದೆ. ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿನ ಹೊಸ ಪ್ರಯೋಗಗಳಿಂದ ಹೆಚ್ಚು ಉದ್ಯೋಗ ಸೃಷ್ಠಿಯಾಗಿವೆ. ಮಾಧ್ಯಮ ವಿದ್ಯಾರ್ಥಿಗಳು ಶ್ರದ್ಧೆಯಿಂದ ವೃತ್ತಿ ಕೌಶಲ್ಯಗಳನ್ನು ಕಲಿತರೆ ಉತ್ತಮ ಅವಕಾಶಗಳನ್ನು ಪಡೆಯಬಹುದು. ಪ್ರಚಲಿತ ವಿದ್ಯಮಾನಗಳ ಕಡೆಗಿನ ಆಸಕ್ತಿ, ಕುತೂಹಲದ ಕಣ್ಣು ಮತ್ತು ಆಕರ್ಷಕ ಬರವಣಿಗೆ ಮೈಗೂಡಿಸಿಕೊಂಡರೆ ಉತ್ತಮ ಪತ್ರಕರ್ತರಾಗಿ ರೂಪುಗೊಂಡು ಸಮಾಜ ಸೇವೆಗೆ ಸಮರ್ಪಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಟಿವಿ11 ಕನ್ನಡ ವಾಹಿನಿ ಮುಖ್ಯಸ್ಥ ರಾಜಶೇಖರ್ ಮಾಲಿಪಾಟಿಲ್ ಮಾತನಾಡಿ ಪತ್ರಿಕೋದ್ಯಮ ಅಭಿವೃದ್ಧಿ ವಿಚಾರಗಳನ್ನು ಗುರುತಿಸಿ ಶಾಸ್ವತ ಪರಿಹಾರಕ್ಕೆ ದಿಕ್ಕು ಸೂಚಿಸುವ ಕೆಲಸ ಮಾಡುತ್ತಿದೆ. ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸುವ ಯುವ ಪತ್ರಕರ್ತರು ಸೇವೆಯಲ್ಲಿ ಪ್ರಾಮಾಣಿಕತೆಗೆ ಒತ್ತು ನೀಡಿದರೆ ಯಶಸ್ವಿ ಪತ್ರಕರ್ತರಾಗಬಹುದು ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನೂತನ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಿಕೋದ್ಯಮ ವಿಶೇಷ ಕ್ಷೇತ್ರವಿದೆ. ನಿಮ್ಮ ನಿರಂತರ ಅಧ್ಯಯನ ಮತ್ತು ವೃತ್ತಿ ಕೌಶಲ್ಯ ಕಲಿಕೆಯಲ್ಲಿ ಪರಿಪೂರ್ಣತೆ ಗಳಿಸಿದರೆ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಉತ್ತಮ ಹುದ್ದೆಗಳನ್ನು ಪಡೆಯಬಹುದು ಎಂದರು.

ಅತಿಥಿ ಉಪನ್ಯಾಸಕ ಡಾ. ಕೆ.ಎಂ. ಕುಮಾರಸ್ವಾಮಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕೋದ್ಯಮ ಕ್ಷೇತ್ರದ ಬೆಳವಣಿಗೆಗೆ ಹಲವಾರು ದೀಮಂತ ಪತ್ರಕರ್ತರು ಶ್ರಮಿಸಿದ್ದಾರೆ ಅವರ ಪತ್ರಿಕಾ ಸೇವೆ ಮತ್ತು ಸಾಧನೆಗಳನ್ನು ಸ್ಮರಿಸಿಕೊಂಡು ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಂಡರೆ ಉತ್ತಮ ಪತ್ರಕರ್ತರಾಗಬಹುದು ಎಂದರು. ವಿಭಾಗದ ಅತಿಥಿ ಉಪನ್ಯಾಸಕರಾದ ಡಾ. ವೆಂಕಟೇಶ ನರಸಪ್ಪ, ಡಾ. ರಾಜಕುಮಾರ, ಡಾ. ಅಶೋಕ ಶರಣಪ್ಪ, ಸಂಶೋಧನಾ ವಿದ್ಯಾರ್ಥಿ ಆನಂದ ಯಾತನೂರು, ಶಿಕ್ಷಕೇತರ ಸಿಬ್ಬಂದಿ ಅಯ್ಯಣ್ಣ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು. ರಾಜೇಂದ್ರ ದಂಡೋತಿ ಪ್ರಾರ್ಥಿಸಿದರು. ಬೋರಮ್ಮ ಕಲಬುರಗಿ ಕಾರ್ಯಕ್ರಮ ನಿರ್ವಹಿಸಿದರು.

. ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಕನ್ನಡ ಪತ್ರಿಕೋದ್ಯಮ ದಿನಾಚರಣೆ ನಿಮಿತ್ತ ಆಯೋಜಿಸಿದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಸುಭಾಷ್ ಬಣಗಾರ ಮಾತನಾಡಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷ ಕೌಶಲ್ಯ ಜ್ಮಾನಕ್ಕೆ ಪ್ರಾಮುಖ್ಯತೆಯಿದೆ. ಮಾಧ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಸೃಷ್ಠಿಯಾಗಿವೆ. ಅಗತ್ಯಕ್ಕೆ ತಕ್ಕಂತೆ ಪದವಿ ಹಂತದಲ್ಲಿ ಪತ್ರಿಕೋದ್ಯಮ ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಲು ಪ್ರತಿಯೊಂದು ಪದವಿ ಕಾಲೇಜುಗಳಲ್ಲಿಯೂ ಕೂಡ ಐಚ್ಛಿಕ ವಿಷಯವಾಗಿ ಅಳವಡಿಸಿಕೊಂಡು ಅಧ್ಯಯನಕ್ಕೆ ಹೆಚ್ಚು ಅವಕಾಶ ಕಲ್ಪಿಸಿದರೆ ಪತ್ರಿಕೋದ್ಯಮ ಶಿಕ್ಷಣ ಮೂಲಕ ಪತ್ರಕರ್ತ ವೃತ್ತಿಯ ಮೌಲ್ಯ ಹೆಚ್ಚಾಗಲಿದೆ ಎಂದರು.
ಮಾದ್ಯಮ ರಂಗದ ಜವಾಬ್ದಾರಿ ಇಂದು ಹೆಚ್ಚಾಗಿದೆ. ಹಾಗೆಯೇ. ಅಗತ್ಯ ವೃತ್ತಿ ಜ್ಞಾನವಿರುವ ಯುವ ಪತ್ರಕರ್ತರ ಅವಶ್ಯಕತೆಯಿದೆ. ವೃತ್ತಿಯಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಯುವಕರು ಉತ್ಸುಕರಾಗಿದ್ದಾರೆ. ಅದಕ್ಕೆ ಪೂರಕವಾಗಿ ಪದವಿ ಹಂತದಲ್ಲಿ ಪತ್ರಿಕೋದ್ಯಮ ಅಧ್ಯಯನಕ್ಕೆ ವಿಶ್ವವಿದ್ಯಾಲಯಗಳು ಹಾಗೂ ಪದವಿ ಮಹಾವಿದ್ಯಾಲಯಗಳು ವಿಶೇಷ ಒತ್ತು ಕೊಡಬೇಕಿದೆ ಎಂದರು.