ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ ಬೆಳಗೆರೆ

ಮಧುಗಿರಿ, ನ. ೧೮- ಬಹುಮುಖ ಪ್ರತಿಭೆಯ ರವಿಬೆಳಗೆರೆ ತಮ್ಮ ನೇರ, ದಿಟ್ಟ, ನಿಷ್ಟೂರ ಬರವಣಿಗೆಯಿಂದ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನು ನೀಡಿದ್ದರು ಎಂದು ಟಿ.ವಿ.ವಿ. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಖ್ಯಾತ ಪತ್ರಕರ್ತ ರವಿಬೆಳಗೆರೆ ಅವರಿಗೆ ಏರ್ಪಡಿಸಿದ್ದ ಭಾವಪೂರ್ಣ ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವುದೇ ವಿಷಯವನ್ನು ಎತ್ತಿ ಹಿಡಿದು ಓದುಗರಿಗೆ ಮನದಟ್ಟು ಮಾಡುವ ಚಾಣಾಕ್ಷತೆ ಅವರ ಬರಹದಲ್ಲಿ ಕಂಡು ಬರುತ್ತಿತ್ತು ಎಂದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಅಕ್ಷರ ಲೋಕದ ಮಾಂತ್ರಿಕ ಎಂದು ಹೆಸರು ಮಾಡಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ತಮ್ಮ ನಿಷ್ಟೂರ ಬರವಣಿಗೆಯಿಂದ ಅಪಾರ ಓದುಗರನ್ನು ಹೊಂದಿದ್ದರು. ಅವರ ಅಗಲಿಕೆಯಿಂದ ಕನ್ನಡ ಮಾಧ್ಯಮ ಲೋಕ ಬಡವಾಗಿದೆ ಎಂದರು.
ಶಿಕ್ಷಕ ಹನುಮಂತಪುರ ಪ್ರಕಾಶ್ ಮಾತನಾಡಿ, ರವಿಬೆಳಗೆರೆ ಅವರು ಪತ್ರಕರ್ತ ಮಾತ್ರವಲ್ಲದೆ ಸಾಹಿತಿಯಾಗಿ, ಕವಿಯಾಗಿ, ನಟನಾಗಿ, ನಿರೂಪಕನಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ವಿಶಿಷ್ಟ ಬಹುಮುಖ ಪ್ರತಿಭೆ ಎಂದು ಬಣ್ಣಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ ಮಾತನಾಡಿ, ಖಡ್ಗಕ್ಕಿಂತ ಲೇಖನಿಗೆ ತಾಕತ್ತು ಹೆಚ್ಚು ಎನ್ನುವುದನ್ನು ರವಿಬೆಳಗೆರೆ ತೋರಿಸಿ ಕೊಟ್ಟರು ಎಂದರು.
ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ ಮಾತನಾಡಿ, ರವಿಬೆಳಗೆರೆ ಅವರು ತಮ್ಮ ಪತ್ರಿಕೋದ್ಯಮದ ಜತೆಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಿಕ್ಷಣ ಪ್ರೇಮ ಮೆರೆದಿದ್ದರು ಎಂದರು.
ಸಭೆಯಲ್ಲಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮಿನರಸಯ್ಯ, ಶಿಕ್ಷಕ ರಂಗನಾಥಪ್ಪ, ಶಾಂತಮ್ಮ, ಲತಾ ರಾಮಚಂದ್ರ, ಶಾರದಾ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.