ಪತ್ರಿಕೆಗಳ ಅಧ್ಯಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕ

ಕಲಬುರಗಿ:ನ.18: ವಿದ್ಯಾರ್ಥಿಗಳು ಕೇವಲ ಪಠ್ಯದ ಅಧ್ಯಯನಕ್ಕೆ ಮಾತ್ರ ಸೀಮಿತವಾಗಬಾರದು. ರಾಜಕೀಯ, ಸಾಮಾಜಿಕ, ಧಾರ್ಮಿಕ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಪ್ರಚಲಿತ ಸಂಗತಿಗಳು ಸೇರಿದಂತೆ ಅನೇಕ ವಿಷಯಗಳ ಜ್ಞಾನದ ಕಣಜಗಳಾದ ಪತ್ರಿಕೆಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಅಧ್ಯಯನ ಮಾಡುವುದರಿಂದ ನಿಮ್ಮ ವ್ಯಕ್ತಿತ್ವ ವಿಕಾಸವಾಗಿ ಉನ್ನತವಾದ ಸಾಧನೆ ಮಾಡಲು ಪತ್ರಿಕೆಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಅಭಿಮತ ವ್ಯಕ್ತಪಡಿಸಿದರು.

   ನಗರದ ಶೇಖರೋಜಾದಲ್ಲಿರುವ 'ಓಂ ಶ್ರೀ ಜ್ಯೋತಿ ಶಿಕ್ಷಣ ಸಂಸ್ಥೆ'ಯ 'ಸ್ವಾತಿ ಪ್ರೌಢಶಾಲೆ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಬುಧವಾರ ಏರ್ಪಡಿಲಾಗಿದ್ದ 'ರಾಷ್ಟ್ರೀಯ ಪತ್ರಿಕಾ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

   ವರ್ಷದಲ್ಲಿ ಎರಡು ಬಾರಿ ಅಂದರೆ ಜುಲೈ-1ರಂದು 'ವಿಶ್ವ ಪತ್ರಿಕಾ ದಿನಾಚರಣೆ' ಮತ್ತು 'ನವ್ಹೆಂಬರ್-16ನ್ನು 'ರಾಷ್ಟ್ರೀಯ ಪತ್ರಿಕಾ ದಿನಾಚರಣೆ'ಗಳಿವೆ. 1966ರ ನವ್ಹೆಂಬರ್ 16ರಂದು ಸ್ಥಾಪನೆಯಾದ 'ಭಾರತೀಯ ಪತ್ರಿಕಾ ಮಂಡಳಿ' ಸವಿನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ಪತ್ರಿಕೆಗಳು ನಿಖರ ಮಾಹಿತಿ ಮತ್ತು ಶಾಶ್ವತ ದಾಖಲೆ ಒದಗಿಸುವದರಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಾಮಾಜಿಕ ಮಾಧ್ಯಮಗಳ ಹಾವಳಿಯಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿವೆ ಎಂಬುದಕ್ಕೆ ಓದುಗರ ಸಂಖ್ಯೆ ಕಡಿಮೆಯಾಗದಿರುವುದೇ ಸಾಕ್ಷಿಯಾಗಿದೆ ಎಂದರು.

  ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ಈ ಬಡಾವಣೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚಾಗಿರುವುದರಿಂದ, ಅದನ್ನು ಗಮನದಲ್ಲಿರಿಸಿಕೊಂಡು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಕೂಡಾ ಆದ್ಯತೆಯನ್ನು ನೀಡುವ ಮೂಲಕ ನಮ್ಮ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಶರಣಬಸಪ್ಪ ಮಾಲಿ ಬಿರಾದಾರ ದೇಗಾಂವ, ಸಿದ್ದರಾಮ ತಳವಾರ, ಗಿರೀಶ ಕುಲಕರ್ಣಿ, ಸಿದ್ದಾರೂಡ ಬಿರಾದಾರ, ಪಲ್ಲವಿ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.