ಪತ್ರಿಕೆಗಳನ್ನ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಶಹಾಜಹಾನ ಡೊಂಗರಗಾಂವ

ಅಥಣಿ :ಜು.18: ಯಾವುದೇ ಪ್ರಜಾಪ್ರಭುತ್ವ ದೇಶದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಪತ್ರಿಕೆಗಳ ಪಾತ್ರ ಬಹುಮುಖ್ಯವಾಗಿದೆ, ಸ್ವಾತಂತ್ರ್ಯಾಪೂರ್ವದಿಂದಲೂ ಪತ್ರಿಕೆಗಳು ತಮ್ಮ ಘನತೆ ಹಾಗೂ ಬದ್ಧತೆಯನ್ನು ಕಾಯ್ದುಕೊಂಡು ಬಂದಿವೆ ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಹೇಳಿದರು,

ಅವರು ತಾಲೂಕಿನ ಐಗಳಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ, ತಾಲೂಕಾ ಗ್ರಾಮೀಣ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಸಮಾಜದಲ್ಲಿ ಪತ್ರಿಕಾ ರಂಗದ ಕೊಡುಗೆ ಅಪಾರವಾಗಿದೆ ಸಮಾಜದ ತಪ್ಪುಗಳನ್ನು ತಿದ್ದುವ ಪತ್ರಕರ್ತರ ಸೇವೆ ಶ್ಲಾಘನೀಯವಾಗಿದೆ, ಮುದ್ರಣ ಮಾಧ್ಯಮದಲ್ಲಿ ಹೆಚ್ಚು ವಸ್ತುನಿಷ್ಠ ವರದಿ ಸಿಗುತ್ತವೆ. ಪತ್ರಕರ್ತರು ಕರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ವಸ್ತು ನಿಷ್ಠೆ ವರದಿಗಳನ್ನು ಮಾಡಿದ್ದು ಎಂದಿಗೂ ಮರೆಯಲು ಸಾಧ್ಯವಿಲ್ಲ, ಕಳೆದ ವರ್ಷ ದ್ರಾಕ್ಷಿ ಬೆಳೆಗಾರರಿಗೆ ಹಾನಿಯಾದ ಬಗ್ಗೆ ಪತ್ರಿಕೆಗಳಲ್ಲಿ ವರದಿ ಮಾಡಿ ದ್ರಾಕ್ಷಿ ಬೆಳೆಗಾರರಿಗೆ ನೆರವಾದರು, ನಮ್ಮ ಭಾಗದ ದ್ರಾಕ್ಷಿ ಬೆಳೆಗೆ ಫಸಲ್ ವಿಮೆ ಹೆಚ್ಚಿಗೆ ಸಿಗಬೇಕಾದರೆ ಪತ್ರಿಕಾ ಮಾಧ್ಯಮದವರು ಸುದ್ದಿ ಮಾಡಿದ್ದರಿಂದ ಸಾಧ್ಯವಾಯಿತು, ಪತ್ರಿಕೆಗಳಲ್ಲಿ ಒಂದು ಇಲಾಖೆಯ ನ್ಯೂನತೆಗಳ ಬಗ್ಗೆ ಸುದ್ದಿ ಬರೆದರೆ ಮರುದಿನವೇ ಆ ನ್ಯೂನತೆ ಸರಿಯಾಗುತ್ತದೆ ಪತ್ರಿಕಾ ರಂಗಕ್ಕೆ ಅಷ್ಟು ಶಕ್ತಿ ಇದೆ, ಪತ್ರಕರ್ತರ ಬದುಕು ಸಂಕಷ್ಟದಲ್ಲಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಪತ್ರಕರ್ತರ ಬದುಕಿಗೆ ಭಧ್ರತೆ ದೊರೆಯಬೇಕಿದೆ’ ಎಂದರು.
ಯುವ ನಾಯಕ ಚಿದಾನಂದ ಸವದಿ ಮಾತನಾಡಿ, ಪತ್ರಿಕೆಗಳು ಎಚ್ಚರಿಕೆ ಕೊಡುವ ಮಾಧ್ಯಮವಾಗಬೇಕು ನಕಲಿ ಪತ್ರಕರ್ತರ ಹಾವಳಿಯಿಂದ ಸಮಾಜವನ್ನು ರಕ್ಷಿಸಬೇಕಿದೆ. ಸಾಕಷ್ಟು ದೃಶ್ಯ ಮಾಧ್ಯಮಗಳು ಇದ್ದರೂ ಕೂಡಾ ಬೆಳಿಗ್ಗೆ ಎದ್ದು ಕೈಯಲ್ಲಿ ಪತ್ರಿಕೆ ಹಿಡಿದು ಓದಿದರೆ ಸಮಾಧಾನ ಆಗುತ್ತದೆ, ಇಲ್ಲದಿದ್ದರೆ ಏನೋ ಕಳೆದುಕೊಂಡ ಹಾಗೆ ಆಗುತ್ತದೆ ಎಂದರು.

ಈ ವೇಳೆ ಮುಖಂಡರಾದ ಸಿ ಎಸ್ ನೇಮಗೌಡ, ಶಿವಾನಂದ ಗುಡ್ಡಾಪೂರ, ನೂರಅಹ್ಮದ ಡೊಂಗರಗಾಂವ, ರಾಜಶ್ರೀ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು