ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ, ರಾಷ್ಟ್ರದ ಅಭಿವೃದ್ಧಿಗೆ ಪೂರಕ

ಕಲಬುರಗಿ:ಮೇ.4: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ, ದೇಶದ ಸಮಸ್ಯೆಗಳ ಬಗ್ಗೆ ಮೇಲಿಂದ ಮೇಲೆ ಬೆಳಕು ಚೆಲ್ಲಿ, ಅದಕ್ಕೆ ಪರಿಹಾರವನ್ನು ಹುಡುಕುವಂತೆ ಮಾಡಿ ಸ್ವಸ್ಥ, ಸಧೃಢ ರಾಷ್ಟ್ರ ನಿರ್ಮಾಣಕ್ಕೆ ‘ಮಾದ್ಯಮ ರಂಗ’ ತನ್ನದೇ ಆದ ಅದ್ವಿತೀಯ ಕೊಡುಗೆಯನ್ನು ನೀಡುತ್ತಿದೆ. ಈ ಮೂರು ಅಂಗಗಳಿಗೆ ದೊರೆತ ಸಂವಿಧಾನಾತ್ಮಕ ಸ್ಥಾನಮಾನ ಪತ್ರಿಕಾ ಮಾಧ್ಯಮಕ್ಕೆ ನೀಡಿದರೆ, ಅದು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುತ್ತದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ನಗರದ ಸಂತೋಷ ಕಾಲನಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸರಳವಾಗಿ ಜರುಗಿದ ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ’ಯಲ್ಲಿ ಪತ್ರಿಕೆಗಳನ್ನು ಓದುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

   ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡುವ ಮೂಲಕ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ಪತ್ರಿಕೆಗಳು ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಿವೆ. ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳು, ಜನರ ಹಕ್ಕುಗಳು ಹಾಗೂ ಕರ್ತವ್ಯಗಳ ರಕ್ಷಣೆ, ದೇಶದ ಕಲೆ, ಸಾಹಿತ್ಯ, ಸಂಸ್ಕøತಿ, ಭವ್ಯ ಪರಂಪರೆ, ಭಾಷೆ, ನೆಲ, ಜಲ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆಯೆಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಅಣ್ಣಾರಾಯ ಎಚ್.ಮಂಗಾಣೆ, ದೇವೇಂದ್ರಪ್ಪ ಗಣಮುಖಿ, ಶಿವಪುತ್ರಯ್ಯಸ್ವಾಮಿ ಬೆಣ್ಣೂರ, ಕಲ್ಯಾಣಪ್ಪ ಮೂಲಗೆ, ಶಿವಪುತ್ರಪ್ಪ ರಾಮಶೆಟ್ಟಿ, ಬಾಬುರಾವ ಜಗದಾಳೆ, ಕಾಡಪ್ಪ ಬಿರಾದಾರ, ಅಣವೀರಯ್ಯ ಸ್ವಾಮಿ, ಅನ್ನಪೂರ್ಣ ಇದ್ದರು.