ಪತ್ರಿಕಾ ವಿತರಣೆ ಸ್ವಾವಲಂಬಿ ಬದುಕಿಗೆ ಪ್ರೇರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.04: ಚಳಿ, ಮಳೆ, ಗಾಳಿ ಯಾವುದಕ್ಕೂ ಅಂಜದೆ ತನ್ನ ಮನೆಯಲ್ಲಿ ಸಂಭವಿಸುವ ಸಾವು-ನೋವುಗಳ ಲೆಕ್ಕಿಸದೆ ಕಾಯಕ ನಿಷ್ಠೆ ತೋರುವ ಪತ್ರಿಕೆ ವಿತರಕರ ದಿನ ಇಂದು, ವರ್ಷಕ್ಕೆ ಒಮ್ಮೆಯಾದರೂ ಅವರನ್ನು ನೆನಪಿಸಿಕೊಂಡು ಗೌರವಿಸಬೇಕಾದ ದಿನ. ಬನ್ನಿ ಅವರನ್ನು ಪ್ರೀತಿಯಿಂದ, ಗೌರವದಿಂದ ಸೌಹಾರ್ದತೆಯಿಂದ ಕಾಣೋಣ. ಅವರ ಕರ್ತವ್ಯ ಪರತೆಗೆ ಅಭಿನಂದಿಸೋಣ.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಪತ್ರಿಕೆ ವಿತರಕ ಎಚ್. ಕಾಡಸಿದ್ದ ತಮ್ಮ ಅನುಭವ ಹೀಗೆ ಹಂಚಿಕೊಳ್ಳುತ್ತಾರೆ,
ನಾನು ನಾಲ್ಕು ವರ್ಷಗಳ ಹಿಂದೆ ಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದ , ಎರಡು ವರ್ಷಗಳಿಂದ ಏಜೆಂಟ್ ಆಗಿದ್ದೇನೆ. ಬಿ.ಎ ನಾಲ್ಕನೆ ಸೆಮಿಸ್ಟರ್ ಓದುತ್ತಿದ್ದು, ವಿದ್ಯಾಭ್ಯಾಸ ಮಾಡುತ್ತ ತಿಂಗಳಿಗೆ 10 ಸಾವಿರ ರೂಪಾಯಿ ದುಡಿಯುತ್ತಿದ್ದೇನೆ. ದುಡಿಮೆಯ ಹಣದಿಂದ ಕಾಲೇಜಿನ ಶುಲ್ಕ ಕಟ್ಟಿಕೊಂಡು ವಿದ್ಯಾಭ್ಯಾಸ ಹೊಂದಲು ಅನುಕೂಲವಾಗಿದೆ. ಪತ್ರಿಕೆಗಳನ್ನು ಹಾಕುತ್ತ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದೇನೆ ಎನ್ನುತ್ತಾರೆ.
  ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಬಳ್ಳಾರಿಯಲ್ಲಿ ಐ ಟಿ ಐ ಓದುತ್ತಿರುವ ಖಾದರ್ ಭಾಷ ಮತ್ತು  8ನೇ ತರಗತಿಯ ಕಾರ್ತಿಕ್ ಪತ್ರಿಕೆ ಹಂಚುವ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಬೆಳಿಗ್ಗೆ 4 ಗಂಟೆಗೆ ಪತ್ರಿಕೆ ಜೋಡಿಸಿಕೊಂಡು ಮನೆಮನೆಗೆ ಹಂಚಿ 5.30 ಒಳಗಾಗಿ ಮನೆ ಸೇರುವುದರಿಂದ ವಿದ್ಯಾಭ್ಯಾಸಕ್ಕೂ ಅನುಕೂಲವಾಗಿದೆ ಎನ್ನುತ್ತಾರೆ.
ಹೇಳಿಕೆ:-  ಪತ್ರಿಕಾ ವಿತರಕರಿಗೆ ಆರ್ಥಿಕ ಭದ್ರತೆ ಅಥವಾ ಸರ್ಕಾರದ ಯಾವುದೇ ಸೌಲಭ್ಯಗಳು ಇರುವುದಿಲ್ಲ, ಅಸಂಘಟಿಕ ಕಾರ್ಮಿಕರ ಸೌಲಭ್ಯವನ್ನಾದರೂ ಸರ್ಕಾರ ನೀಡಬೇಕು
– ಎಚ್. ಕಾಡಸಿದ್ದ ಪತ್ರಿಕೆ ವಿತರಕ ತೆಕ್ಕಲಕೋಟೆ
ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ಮಾಡಿಸಬೇಕು. ಪ್ರತಿ ದಿನ ಓಡಾಡಲು ಸೈಕಲ್‌ ಕೊಡಬೇಕು. ಗೌರವ ಧನ ಮಂಜೂರು ಮಾಡಬೇಕು ಎಂಬುದೂ ಸೇರಿದಂತೆ ಕೆಲವು ಪ್ರಾಥಮಿಕ ಬೇಡಿಕೆಗಳು ಹಾಗೂ ಪ್ರತಿ ನಸುಕಿನಲ್ಲಿ ಊರು ಅಲೆದು ಪತ್ರಿಕೆ ಹಂಚುವ ಸಂದರ್ಭದಲ್ಲಿ ಅವಘಡ ಸಂಭವಿಸಿದ ಸಾಕಷ್ಟು ಉದಾಹರಣೆಗಳಿವೆ. ಇಂಥ ಸಂದರ್ಭದಲ್ಲಿ ವಿಮೆ ಇದ್ದರೆ ಧೈರ್ಯ ಬರುತ್ತದೆ ಎಂದು ಆದ್ದರಿಂದ ಸರ್ಕಾರವು ನಮ್ಮ ಪತ್ರಿಕಾ ವಿತರಕರಿಗೆ ಸಹಾಯ ಹಸ್ತವನ್ನು ತರಬೇಕೆಂದು ಹುಸೇನ್ ಸಾಬ್ ಪತ್ರಿಕೆ ವಿತರಕ ಸಿರುಗುಪ್ಪ ಇವರು ಹೇಳಿದರು.