ಪತ್ರಿಕಾ ವಿತರಕರ ಜೀವನ ಹಸನಾಗಲಿ

ವಿಜಯಪುರ : ಸೆ.5:ಅವರಿಗೆ ಒಂದೇ ಒಂದು ದಿನವೂ ರಜೆಯಿಲ್ಲ. ಕೊರೆವ ಚಳಿಯಿರಲಿ, ಧಾರಾಕಾರ ಮಳೆ ಒತ್ತಟ್ಟಿಗಿರಲಿ. ಸಂಬಂಧಿಕರ ಮನೆಯಲ್ಲಿ ಕಹಿ-ಸಿಹಿ ಘಟನೆ ನಡೆದರೂ ಅವರ ಕಾಯಕ ಮಾತ್ರ ನಿರಂತರ. ಅವರೇ ನಿತ್ಯ ಮನೆ, ಮನಕ್ಕೂ ತಾಜಾ ಸುದ್ದಿಗಳ ಹೂರಣವುಳ್ಳ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರು. ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಬೃಹತ್ ಕೇಕ್ ಕಟ್ ಮಾಡುವ ಮೂಲಕ ವಿಶ್ವ ಪತ್ರಿಕಾ ವಿತರಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಭಾನುವಾರ ಬೆಳಗ್ಗೆ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಹೊಸ ಪತ್ರಿಕಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 10ಕ್ಕೂ ಅಧಿಕ ಪತ್ರಿಕಾ ವಿತರಕರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಪತ್ರಿಕಾ ವಿತರಕರ ಕಾಯಕಕ್ಕೆ ಉತ್ತೇಜನ ನೀಡಲಾಯಿತು.
ಬಳಿಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ಪತ್ರಿಕಾ ವಿತರಕರು ಆಯಾ ಪತ್ರಿಕೆಗಳ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೊರೊನಾದಂಥ ಸಂಕಷ್ಟ ಸಮಯದಲ್ಲಿ ಒಲ್ಲದ ಮನಸ್ಸಿನಿಂದ ಪೆÇಲೀಸರ ಲಾಠಿ ರುಚಿ ಸವಿಯುತ್ತಲೇ ಮನೆ, ಮನೆಗೂ ಪತ್ರಿಕಾ ವಿತರಿಸುವ ಮೂಲಕ ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸಿದ ಪತ್ರಿಕಾ ವಿತರಕರ ಕಾರ್ಯ ಅವಿಸ್ಮರಣೀಯವಾದುದು ಎಂದರು.
ನೂರೆಂಟು ಕಷ್ಟಗಳಿದ್ದರೂ, ಹೊರಗೆ ತೋರ್ಪಡಿಸದೇ, ನಸುಕಿನ ಜಾವ ಬೇಗ ಎದ್ದು, ಪ್ರತಿಯೊಬ್ಬರಿಗೂ ಪತ್ರಿಕೆಗಳ ಮೂಲಕ ಪ್ರಚಲಿತ ಘಟನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಅವರ ಭವಿಷ್ಯ ಸುಧಾರಣೆಯಾಗಲಿ ಎಂದು ಆಶಿಸಿದರು.
ವಿಜಯ ಕರ್ನಾಟಕ ಪತ್ರಿಕೆ ಪ್ರಸಾರಾಂಗ ವ್ಯವಸ್ಥಾಪಕ ರಮೇಶ ವಿಟ್ಲಾಪುರ ಮಾತನಾಡಿ, ಹಲವಾರು ಪತ್ರಿಕೆಗಳ ಬೆನ್ನೆಲುಬಾಗಿರುವ ಪತ್ರಿಕೆ ವಿತರಕರು ಎದುರಿಸುತ್ತಿರುವ ತಾಪತ್ರಯಗಳಿಗೆ ಲೆಕ್ಕವಿಲ್ಲ. ಆದರೆ ಅವುಗಳನ್ನೆಲ್ಲ ಮೆಟ್ಟಿ ನಿಂತು ಜನರಿನ್ನೂ ನಿದ್ರೆಯ ಮಂಪರಿನಲ್ಲಿದ್ದಾಗಲೇ ಅವರ ಮನೆಗೆ ಪತ್ರಿಕೆ ತಲುಪಿಸುವ ಕಾರ್ಯ ಶ್ರೇಷ್ಠವಾದುದು ಎಂದು ಬಣ್ಣಿಸಿದರು. ವಿತರಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ನಿಟ್ಟಿನಲ್ಲಿ ವಿತರಕರೆಲ್ಲ ಸಂಘಟಿತರಾಗಿ, ತಮ್ಮ ಹಕ್ಕುಗಳಿಗೆ ಹೋರಾಟ ರೂಪಿಸಬೇಕೆಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತೆ ಕೌಶಲ್ಯಾ ಪನಾಳಕರ ಮಾತನಾಡಿ, ಪತ್ರಿಕೆಯೊಂದರ ಸಂಪಾದಕಿಯಾಗಿರುವ ನನಗೆ ಪತ್ರಿಕಾ ವಿತರಕರ ಕಷ್ಟ-ಕಾರ್ಪಣ್ಯಗಳ ಸಂಪೂರ್ಣ ಅರಿವಿದೆ. ಆದಾಗ್ಯೂ ಧೃತಿಗೆಡದೇ ನಿತ್ಯ ಪತ್ರಿಕೆಗಳನ್ನು ತಲುಪಿಸುವ ವಿತರಕರ ಕಾರ್ಯ ಪ್ರಶಂಸನೀಯ ಎಂದರು.
ವಿಜಯವಾಣಿ ಪತ್ರಿಕೆ ಪ್ರಸಾರಾಂಗ ವಿಭಾಗದ ಈರಣ್ಣ ಅವಟಿ, ಪ್ರಜಾವಾಣಿ ಪ್ರಸಾರಂಗ ವಿಭಾಗದ ಬಸವರಾಜ, ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಬು ಮಂಗಾನವರ ಮಾತನಾಡಿದರು.
10 ಜನ ವಿತರಕರಿಗೆ ಸನ್ಮಾನ : ಇದೇ ವೇಳೆ ನಗರದ 10 ಜನ ವಿತರಕರನ್ನು ಉಭಯ ಸಂಘಟನೆಗಳ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ವೌನಾಚಾರಣೆ : ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗಷ್ಟೇ ಕೊನೆಯುಸಿರೆಳೆದ ಮುದ್ದೇಬಿಹಾಳ ಪಟ್ಟಣದ ಪತ್ರಿಕಾ ವಿತರಕ ಎಸ್.ಬಿ. ಕತ್ತಿ ಅವರ ಆತ್ಮಕ್ಕೆ ಶಾಂತಿ ಕೋರಿ ವೌನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿಗಳಾದ ರಾಹುಲ ಆಪ್ಟೆ, ದೀಪಕ ಶಿಂತ್ರೆ, ಸಂಘದ ಸದಸ್ಯ ಸಂಜು ಅಕ್ಕಿ, ವಿತರಕರಾದ ಗಣೇಶ ರುದ್ರಘಂಟಿ, ದಯಾನಂದ ಶಿರಶ್ಯಾಡ, ಶಿವಾನಂದ ಹೂಗಾರ, ಸುರೇಶ ಬೂದಿಹಾಳ, ನಾಗರಾಜ ಅವಜಿ, ಭೀಮು ವಳಸಂಗ, ಮಲ್ಲಿಕಾರ್ಜುನ ಹಳ್ಳದ ಮತ್ತಿತರರಿದ್ದರು.