ಪತ್ರಿಕಾ ವಿತರಕರಿಗೆ ಸೇವೆ, ಭದ್ರತಾ ಸೌಲಭ್ಯಗಳು ದೊರೆಯಲಿ

ಕಲಬುರಗಿ:ಸೆ.4: ಸರ್ವ ವಿಷಯಗಳ ಜ್ಞಾನ, ಅನುಭವದ ಆಗರವಾದ ಪತ್ರಿಕೆಗಳನ್ನು ಮಳೆ-ಚಳಿ, ಬಿಸಲು-ಗಾಳಿ, ಹಗಲು-ರಾತ್ರಿಯನ್ನದೇ ಓದುಗರ ಮನೆ ಬಾಗಿಲಿಗೆ ನೇರವಾಗಿ ತಲುಪಿಸುವ ಮೂಲಕ ಪತ್ರಿಕಾ ವಿತರಕರ ಸೇವೆ ಅನನ್ಯ. ಕರೋನಾದ ಸಂದರ್ಭದಲ್ಲಿಯೂ ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸಿದ್ದಾರೆ. ಪತ್ರಿಕಾ ವಿತರಕರನ್ನು ಸರ್ಕಾರಿ ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ಸಾಮೂಹಿಕ ವಿಮೆ, ಭವಿಷ್ಯ ನಿಧಿ, ಕನಿಷ್ಟ ವೇತನ ನಿಗದಿಗೊಳಿಸುವಿಕೆ, ಇಎಸ್‍ಐ, ಪಿಎಫ್, ಬಡ್ಡಿ ರಹಿತ ಸಾಲ ನೀಡುವಿಕೆ, ಮನೆಗಳ ವಿತರಣೆ, ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಮುಂತಾದ ಸೇವೆ, ಭದ್ರತಾ ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದು ಹಿರಿಯ ಪತ್ರಿಕಾ ವಿತರಕ ಗುರುರಾಜ ಗುಡ್ಡಾ ಒತ್ತಾಸೆ ಮಾಡಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ವಿಶ್ವ ಪತ್ರಿಕಾ ವಿತರಕರ ದಿನಾಚರಣೆ’ ಪ್ರಯುಕ್ತ ವಿವಿಧ ಪತ್ರಿಕಾ ವಿತರಕರಿಗೆ ಜರುಗಿದ ಗೌರವ ಸತ್ಕಾರವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪತ್ರಿಕಾ ವಿತರಣೆಯ ಕಾರ್ಯ ಕೀಳೆಂದು ಭಾವಿಸದೆ, ಶೃದ್ದೆಯಿಂದ ಮಾಡಬೇಕು. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಆರಂಭದ ದಿನಗಳಲ್ಲಿ ಪತ್ರಿಕಾ ವಿತರಕರಾಗಿದ್ದು, ನಂತರದ ದೇಶದ ರಾಷ್ಟ್ರಪತಿಯಾಗಿದ್ದು ಮರೆಯುವಂತಿಲ್ಲ. ನೀವು ಜ್ಞಾನ ಪ್ರಸಾರ ಮಾಡುವ ಕಾಯಕ ಜೀವಿಗಳು. ವೈಯಕ್ತಿಕ ಜೀವನವನ್ನು ಬದಿಗೊತ್ತಿ ರಜೆ ರಹಿತ ಕೆಲಸ ಮಾಡುತ್ತೀರಿ. ತಮ್ಮ ಸೇವೆ ಅಮೋಘವಾಗಿದೆ. ಪತ್ರಿಕಾ ವಿತರಕರಿಗೆ ಎಲ್ಲಾ ಸೌಲಭ್ಯಗಳು ದೊರೆಯಬೇಕು ಎಂದರು.
ಪತ್ರಿಕಾ ವಿತರಕರಾದ ಗುರುರಾಜ ಗುಡ್ಡಾ, ಚನ್ನವೀರ ಹಿರೇಮಠ, ಅನಿಲ ಗೌಳಿ, ನಾಗರಾಜ ಹಡಪದ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಸ್ಥೆಯ ಸಿಬ್ಬಂದಿಗಳಾ ಪ್ರಿಯಾಂಕಾ ದೋಟಿಕೊಳ್ಳ, ಸಾನಿಯಾ ಶೇಖ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.