ಪತ್ರಿಕಾ ವಿತರಕರಿಗೆ ಭದ್ರತಾ ಸೌಲಭ್ಯಗಳು ದೊರೆಯಲಿ

ಕಲಬುರಗಿ:ಸೆ.4: ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗ, ಸರ್ವ ವಿಷಯಗಳ ಜ್ಞಾನ, ಅನುಭವದ ಆಗರ. ಪತ್ರಿಕೆಗಳನ್ನು ಮಳೆ-ಚಳಿ, ಬಿಸಲು-ಗಾಳಿ, ಹಗಲು-ರಾತ್ರಿಯನ್ನದೇ ಓದುಗರ ಮನೆ ಬಾಗಿಲಿಗೆ ನೇರವಾಗಿ ತಲುಪಿಸುವ ಮೂಲಕ ಪತ್ರಿಕೆ ಮತ್ತು ಓದುಗರ ನಡುವಿನ ಸಂಪರ್ಕ ಸೇತುವೆಯಾಗಿ ಪತ್ರಿಕಾ ವಿತರಕರು ಕಾರ್ಯ ಮಾಡುತ್ತಾರೆ. ಅವರಿಗೆ ಸಾಮೂಹಿಕ ವಿಮೆ, ಭವಿಷ್ಯ ನಿಧಿ, ಕನಿಷ್ಟ ವೇತನ ನಿಗದಿಗೊಳಿಸುವಿಕೆ, ಇಎಸ್‍ಐ, ಪಿಎಫ್ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ನೀಡಿ, ಅವರಿಗೆ ಭದ್ರತೆ ಒದಗಿಸಬೇಕು ಎಂದು ಹಿರಿಯ ಪತ್ರಿಕಾ ವಿತರಕ ಗುರುರಾಜ ಗುಡ್ಡಾ ಒತ್ತಾಸೆ ಮಾಡಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ‘ಕೊಹಿನೂರ ಶಿಕ್ಷಣ ಸಂಸ್ಥೆ’ಯ ಸಭಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ವಿಶ್ವ ಪತ್ರಿಕಾ ವಿತರಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಗೌರವ ಸತ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಪತ್ರಿಕಾ ವಿತರಣೆಯ ಕಾರ್ಯ ಸಣ್ಣದೆಂದು ಭಾವಿಸದೆ, ಶೃದ್ದೆಯಿಂದ ಮಾಡಬೇಕು. ನೀವು ಜ್ಞಾನ ಪ್ರಸಾರ ಮಾಡುವ ಕಾಯಕ ಜೀವಿಗಳು. ವೈಯಕ್ತಿಕ ಜೀವನವನ್ನು ಬದಿಗೊತ್ತಿ ರಜೆ ರಹಿತ ಕೆಲಸ ಮಾಡುತ್ತೀರಿ. ಕರೋನಾದ ಸಂದರ್ಭದಲ್ಲಿ ಕೆಲಸ ಮಾಡುವುದು ಸವಾಲಿನ ಕಾರ್ಯವಾಗಿದ್ದು, ಎಂತಹ ಸ್ಥಿತಿಗಳಲ್ಲಿಯೂ ನಿಮ್ಮ ಕಾರ್ಯದಿಂದ ವಂಚಿತರಾಗಿಲ್ಲ. ಕಳೆದ 5 ವರ್ಷಗಳಿಂದ ನಮ್ಮ ಬಳಗದ ವತಿಯಿಂದ ಈ ದಿನಾಚರಣೆ ಆಚರಿಸಲಾಗುತ್ತಿದೆ. ಪತ್ರಿಕಾ ವಿತರಕರಿಗೆ ರೇನ್ ಕೋಟ್ ವಿತರಣೆ, ದಿನಸಿ ಆಹಾರದ ಕಿಟ್ ವಿತರಣೆ, ಮಾಸ್ಕ್, ಸಾನಿಟೈಜರ್ ನೀಡಿ ಗೌರವಿಸಲಾಗಿದೆ. ನಿಮಲ್ಲ ಕಾರ್ಯ, ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಸತೀಶ್ ಟಿ.ಸಣಮನಿ, ಪತ್ರಿಕಾ ವಿತರಕ ಶಂಕರ ಕಣ್ಣಿ, ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಸದಸ್ಯರಾದ ನೀಲಕಂಠಯ್ಯ ಹಿರೇಮಠ, ರಾಜಕುಮಾರ ಬಟಗೇರಿ, ದೇವೇಂದ್ರಪ್ಪ ಗಣಮುಖಿ, ಮಲ್ಲಿಕಾರ್ಜುನ ಸೊಲ್ಲಾಪೂರ ನರೋಣಾ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.