ಪತ್ರಿಕಾ ವಿತರಕರಿಗೆ ಪ್ಯಾಕೇಜ್ ಘೋಷಿಸಲು ಮನವಿ

ಶಿವಮೊಗ್ಗ.ಮೇ.೨೭ : ನಗರದಲ್ಲಿ ಹಲವು ವರ್ಷಗಳಿಂದ ಮಳೆ, ಚಳಿ ಬಿಸಿಲು ಎನ್ನದೆ ದಿನಪ್ರತಿ ವಿತರಣೆ ಕಾರ್ಯದಲ್ಲಿ ತೊಡಗಿರುವ ಪತ್ರಿಕಾ ವಿತರಕರಿಗೆ ಲಾಕ್‌ಡೌನ್ ಅವಧಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ನೆರವನ್ನು ಕಲ್ಪಿಸಬೇಕಾಗಿದೆ.ಲಾಕ್‌ಡೌನ್‌ನಿಂದಾಗಿ ಪತ್ರಿಕಾ ವಿತರಣೆ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅನೇಕ ಚಂದಾದಾರರು ಊರುಗಳಿಗಳಿಗೆ ತೆರಳಿದ್ದಾರೆ. ಇನ್ನೂ ಕೆಲವರು ಕೊರೋನಾ ಹೋಗುವವರೆಗೆ ಪತ್ರಿಕೆ ಹಾಕುವುದು ಬೇಡ ಎಂದು ಹೇಳಿದ್ದಾರೆ. ಇದರಿಂದಾಗಿ ನಮ್ಮ ವರಮಾನಕ್ಕೆ ಕೊರತೆಯಾಗಿದೆ. ಇದು ನಮ್ಮ ಜೀವನ ನಿರ್ವಹಣೆಗೆ ಆರ್ಥಿಕ ಹೊರೆಯನ್ನು ಉಂಟುಮಾಡಿದೆ. ಆದ್ದರಿಂದ ಲಾಕ್‌ಡೌನ್ ಮುಗಿಯುವವರೆಗೆ ಹಾಗೂ ಕೊರೋನಾ ತೊಲಗುವವರೆಗೆ ಪತ್ರಿಕಾ ವಿತರಕರಿಗೆ ವಿಶೇಷ ಪ್ಯಾಕೇಜನ್ನು ಘೋಷಿಸುವ ಮೂಲಕ ನಮ್ಮಗಳ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕೆಂದು ರಾಜ್ಯದ ಎಲ್ಲಾ ದಿನಪತ್ರಿಕೆ ವಿತರಕರುಗಳ ಪರವಾಗಿ ಜಿಲ್ಲಾ ದಿನಪತ್ರಿಕೆ ವಿತರಕರ ಸಂಘ (ರಿ.) ಸರ್ಕಾರಕ್ಕೆ ಮನವಿ ಮಾಡಿದೆ.