ಪತ್ರಿಕಾ ವಿತರಕರಿಗೆ ಡಾ. ವಿ.ಎಸ್.ವಿ. ಪ್ರಸಾದ ಆಹಾರ ಕಿಟ್ ವಿತರಣೆ

ಧಾರವಾಡ,ಜೂ9: ಕೋವಿಡ್‍ನ ಎರಡನೇ ಅಲೆಯಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಇಂಥ ಸಂದರ್ಭದಲ್ಲೂ ಪತ್ರಿಕೋದ್ಯಮ ಕ್ಷೇತ್ರ ಸಮಾಜ ಸೇವೆಯನ್ನು ಮುಂದುವರಿಸಿದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಪತ್ರಿಕಾ ವಿತರಕರು ಅನೇಕ ಸವಾಲುಗಳನ್ನು ಎದುರಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಸಿಎಚ್ ವಿ.ಎಸ್.ವಿ. ಪ್ರಸಾದ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾ ವಿತರಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಕೋವಿಡ್ ಎರಡನೇ ಅಲೆಯಿಂದಾಗಿ ದೇಶದಲ್ಲಿ ಸಾವು-ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥ ಕಠಿಣ ಸಂದರ್ಭದಲ್ಲಿ ಮೊದಲು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಿದೆ. ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಕುಟುಂಬ, ಸಮಾಜವನ್ನು ಕಾಪಾಡಬೇಕು. ಪತ್ರಿಕಾ ವಿತರಕರು ಪ್ರತಿದಿನವೂ ಹಲವರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಪ್ರತಿಯೊಬ್ಬರೂ ಪರಸ್ಪರ ಅಂತರ ಕಾಪಾಡಿಕೊಂಡು, ಕೋವಿಡ್ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಹೆಮ್ಮಾರಿ ಆವರಿಸಿ, ಲಾಕ್‍ಡೌನ್ ಹೇರಲಾಗಿರುವ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ತಮ್ಮ ಸಂಸ್ಥೆ ವತಿಯಿಂದ ಕೈಲಾದ ಸಹಾಯ ಮಾಡುತ್ತಿದ್ದು, ಮುಂದೆಯೂ ಕಾರ್ಯ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಹಿರಿಯ ಪತ್ರಿಕಾ ವಿತರಕ ವಿ.ಎಂ. ಹಿರೇಮಠ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಪತ್ರಿಕಾ ವಿತರಕರು ಸಂಕಷ್ಟದಲ್ಲಿರುವುದನ್ನು ಅರಿತು ಅಗತ್ಯ ವಸ್ತುಗಳನ್ನು ನೀಡಿದ ವಿಎಸ್‍ವಿ ಪ್ರಸಾದ ಅವರ ಕಾರ್ಯ ಮಾದರಿಯಾದುದು ಎಂದು ಶ್ಲಾಘಿಸಿದರು.
ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ಶಿವಾನಂದ ಹಲಗಿ, ಶಿವರಾಮ ಶಿರಗುಪ್ಪಿ, ಸದಸ್ಯರಾದ ಶಶಿಕಾಂತ ನೀಲಾಕಾರಿ, ಕೃಷ್ಣಾ ಕುಲಕರ್ಣಿ, ಚಂದ್ರಶೇಖರ ಬೇಲೂರ, ಜಿ.ಎ. ಬದಾಮಿ, ರವಿ ಮಲ್ಲಿಗವಾಡ, ಶ್ರೀಧರ ಪಾಸ್ತೆ, ಅಶೋಕ ಮುಗಳಿ, ಗಿರೀಶ ಮೇಗೆರಿ, ಸಂತೋಷ ದೇವಗಿರಿ, ಸಂತೋಷ ರೋಖಡೆ, ಭೀಮಪ್ಪ, ಇತರರಿದ್ದರು.