
ಅಥಣಿ : ಆ.13:ರೋಟರಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಗಳು ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದ ಎಲ್ಲ ವರ್ಗದವರಿಗೆ ನೆರವು ಕಲ್ಪಿಸುವ ಸಂಸ್ಥೆಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಹೊಂದಿವೆ ಎಂದು ಅಥಣಿ ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಲಲಿತಾ ಡಿ ಮೇಕನಮರಡಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಶುಕ್ರವಾರ ಮನೆಮನೆಗೆ ದಿನಪತ್ರಿಕೆಗಳನ್ನು ಹಂಚುವ ಪತ್ರಿಕಾ ವಿತರಕರಿಗೆ ರೇನ್ ಕೋಟ್ ಗಳನ್ನ ವಿತರಿಸಿ ಮಾತನಾಡಿದರು.ಇನ್ನರ್ ವ್ಹೀಲ್ ಕ್ಲಬ್ ಪ್ರತಿಯೊಬ್ಬರಲ್ಲಿ ಸೇವಾ ಮನೋಭಾವ ಬೆಳೆಸುವುದರ ಜೊತೆಗೆ ಸ್ನೇಹ ಹಸ್ತ ಚಾಚುವ ಕಾರ್ಯವನ್ನು ಮಾಡುತ್ತಿದ್ದು, ಪ್ರತಿದಿನ ಮಳೆ, ಗಾಳಿ, ಚಳಿ ಲೆಕ್ಕಿಸದೆ ಎಲ್ಲ ಸಂದರ್ಭದಲ್ಲಿಯೂ ಪತ್ರಿಕೆಗಳನ್ನು ಹಂಚುವವರ ಕಾರ್ಯ ಶ್ಲಾಘನೀಯ. ಮಳೆಗಾಲ ಮತ್ತು ಚಳಿಗಾಲ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸುವ ಉದ್ದೇಶದಿಂದ ರೇನ್ ಕೋಟ್ ಗಳನ್ನ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಇನ್ನರ್ ವ್ಹೀಲ್ ಕಾರ್ಯದರ್ಶಿ ವೈಶಾಲಿ ಮಠಪತಿ ಮಾತನಾಡಿ ಅಥಣಿ ತಾಲೂಕಿನಲ್ಲಿ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಅನೇಕ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ. ಇಂದು ಪ್ರಾಥಮಿಕ ಹಂತವಾಗಿ ಕಡು ಬಡತನದ ಮಕ್ಕಳಿಗೆ ಮತ್ತು ಪತ್ರಿಕೆಗಳನ್ನು ಹಂಚುವವರಿಗೆ ರೇನ್ ಕೋಟ್ ಗಳನ್ನು ವಿತರಿಸುವ ಕಾರ್ಯವನ್ನ ಮಾಡುತ್ತಿದ್ದೇವೆ. ಮುಂದಿನ ದಿನಮಾನಗಳಲ್ಲಿ ವಿವಿಧ ಸಾಮಾಜಿಕ ಸೇವೆಗಳನ್ನ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಾ. ಸುಧಾ ಗಾಣಿಗೇರ, ಸುವರ್ಣ ಪಾಟೀಲ, ಸುಜಾತಾ ಜಗದಾಳಮಠ, ರೂಪಾಲಿ ಮೋಪಗಾರ, ಸೀತಾ ರಜಪೂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.