ಪತ್ರಿಕಾ ಭವನ ಕಾಮಗಾರಿ ಬೇಗ ಮುಗಿಸಿ: ಸಚಿವ ಚವ್ಹಾಣ

ಬೀದರ: ಜೂ.6:ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪತ್ರಿಕಾ ಭವನಗಳು ಇದ್ದು ನಮ್ಮ ಜಿಲ್ಲೆಯಲ್ಲಿ ಈಗ ಕಾಮಗಾರಿ ನಡೆಯುತ್ತಿದೆ. ಈ ಭವನದ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ರಾಜ್ಯದ ಪಶು ಸಂಗೋಪನೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಭು ಚವ್ಹಾಣ ಸೂಚಿಸಿದರು.

ಶನಿವಾರ ನಗರದ ಆನಂದನಗರದಲ್ಲಿ ನಡೆಯುತ್ತಿರುವ ಪತ್ರಿಕಾ ಭವನದ ಕಾಮಗಾರಿ ವಿಕ್ಷಿಸಿ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.

ಕಾಮಗಾರಿ ಸುಸಜ್ಜಿತವಾಗಿ ನಡೆಯುತ್ತಿರುವುದನ್ನು ಅವಲೋಕಿಸಿದ ಸಚಿವರು, ಕೋವಿಡ್ ಕಾಲದಲ್ಲೂ ಮುತುವರ್ಜಿ ವಹಿಸಿ ಕಾಮಗಾರಿ ಮುಂದುವರೆಸಿರುವ ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರ ಜಿ.ಕೆ ಕನಸ್ಟ್ರೆಕ್ಷನ್ ಮಾಲಿಕರು ಮತ್ತು ಸಿಬ್ಬಂದಿಗಳಿಗೆ ಸಚಿವರು ಇದೇ ವೇಳೆ ಅಭಿನಂದಿಸಿದರು.

ಪತ್ರಕರ್ತರ ಸಂಘದಿಂದ ಸನ್ಮಾನ: ಇದೇ ಮೊದಲ ಬಾರಿಗೆ ಪತ್ರಿಕಾ ಭವನಕ್ಕೆ ಭೇಟಿ ನೀಡಿದ ಸಚಿವ ಚವ್ಹಾಣ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ನೇತೃತ್ವದಲ್ಲಿ ಸಚಿವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಕಾಮಗಾರಿಗೆ ಯಾವುದೇ ತೊಡಕಾಗದಂತೆ ಕಾಳಜಿ ವಹಿಸಿ ಪೂರ್ಣಗೊಳಿಸುವಂತೆ ಕರಂಜಿ ವಿನಂತಿಸಿದರು. ಸಂಘದ ಮನ್ನಣೆಗೆ ತಲೆದೂಗಿದ ಸಚಿವರು, ನಾನಿದ್ದೇನೆ. ನಿಮ್ಮ ಕಷ್ಟ, ಸುಖಗಳಿಗೆ ಸದಾ ಸ್ಪಂದಿಸುವ ಹಾಗೂ ರಾಜ್ಯಕ್ಕೆ ಮಾದರಿ ಪತ್ರಿಕಾ ಭವನ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದರು.

ಪತ್ರಿಕಾ ಭವನದ ಮುಂಭಾಗದಲ್ಲಿ ಸಸಿ ನೆಟ್ಟ ಸಚಿವರು: ಶನಿವಾರ ವಿಶ್ವ ಪರಿಸರ ದಿನ ಇದ್ದ ಕಾರಣ ಸಚಿವರು ತಮ್ಮ ಅಮೃತ ಹಸ್ತದಿಂದ ಎರಡು ತೆಂಗಿನ ಮರಗಳನ್ನು ನೆಟ್ಟು ನೀರುಣಿಸಿದರು.’ ಝಾಡ್ ಲಗಾವ್ ಪತ್ರಿಕಾ ಭವನ ಬಚಾವ್’ ಎಂಬ ಘೋಷಣೆ ಕೂಗಿದರು. ಸಚಿವರ ಮಾತಿಗೆ ಎಲ್ಲರು ಚಪ್ಪಾಳೆ ಹಾಕಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಬಿಜೆಪಿ ಹಿರಿಯ ಮುಖಂಡ ಗುರುನಾಥ ಕೊಳ್ಳೂರ್, ನಗರ ಸಭೆ ಸದಸ್ಯ ಶಶಿ ಹೊಸಳ್ಳಿ, ಲೋಕೊಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಎನ್.ಲಿಂಗರಾಜ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಖಂಡ್ರೆ, ಕಿರಿಯ ಅಭಿಯಂತರ ಕುಪ್ಪಣ್ಣ, ಜಿ.ಕೆ ಕನಸ್ಟ್ರೆಕ್ಷನ್ ವ್ಯವಸ್ಥಾಪಕ ನಿರ್ದೇಶಕ ಸಚಿನ್ ಕೊಳ್ಳುರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಧರಂಪೂರ, ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಸುನಿಲಕುಮಾರ ಕುಲಕರ್ಣಿ, ಕೋಶಧ್ಯಕ್ಷ ಪ್ರಥ್ವಿರಾಜ್.ಎಸ್, ಕಾರ್ಯಕಾರಿ ಸದಸ್ಯ ಶಿವಕುಮಾರ ಸದಲಾಪುರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.