ಪತ್ರಿಕಾ ದಿನಾರಣೆ- ಪ್ರತಿಭಾ ಪುರಸ್ಕಾರ


ಬೆಳಗಾವಿ, ಜು.3: “ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನ ಹಾಗೂ ಹೊಣೆಗಾರಿಕೆಯಿದೆ. ಪತ್ರಕರ್ತರು ಪತ್ರಿಕಾ ನೀತಿ, ಧರ್ಮದನುಸಾರ ಕಾರ್ಯ ನಿರ್ವಹಿಸಿ, ಯುವ ಪತ್ರಕರ್ತರಿಗೆ ಮಾದರಿಯಾಗಬೇಕು. ಪಾರದರ್ಶಕ ವರದಿಯ ಮೂಲಕ ಸಮಾಜದ ಪ್ರಗತಿಗೆ ಸಹಕರಿಸಬೇಕು” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರು ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಬೆಳಗಾವಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೆ.ಎಲ್. ಇ. ಜಿರಗೆ ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಅಂಕು-ಡೊಂಕು ತಿದ್ದಿವ ಮೂಲಕ ಸಮಾಜ ಪ್ರಗತಿಪರ ಹೆಜ್ಜೆ ಇಡುವಲ್ಲಿ ಮಾಧ್ಯಮದ ಪಾತ್ರ ಮಹತ್ವದಾಗಿದೆ. ಎಲ್ಲ ವಲಯಗಳಲ್ಲೂ ಸುಧಾರಣೆ ತರುವ ನಿಟ್ಟಿನಲ್ಲಿ ಸಮಾಜದ ಕನ್ನಡಿಯಾಗಿ ಪತ್ರಿಕಾ ಮಾಧ್ಯಮ ಕೆಲಸ ಮಾಡುತ್ತಿದೆ. ಸಮಾಜದ ತಪ್ಪುಗಳನ್ನು ತಿದ್ದುವ ಪತ್ರಕರ್ತರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರಿಗೆ ನಿವೇಶನ:
ಪತ್ರಕರ್ತರಿಗೆ ಮನೆ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವ ಮೂಲಕ ಪತ್ರಕರ್ತರ ಬಡಾವಣೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹೇಳಿದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, “ಪತ್ರಿಕಾ ಮಾಧ್ಯಮ ಆಡಳಿತ ಸುಧಾರಣೆಯ ಕನ್ನಡಿಯಾಗಿದೆ. ಶುದ್ಧ ವಿಚಾರಗಳ ಸುದ್ದಿ ಮಾಡುವುದು ಅದೇ ರೀತಿಯಲ್ಲಿ ಅಶುದ್ಧವಾದದ್ದನ್ನು ಕೂಡ ಶುದ್ಧ ಮಾಡಿ ಸುದ್ದಿ ಮಾಡುವ ದೊಡ್ಡ ಜವಾಬ್ದಾರಿ ಪತ್ರಿಕಾ ರಂಗದ ಮೇಲಿದೆ. ಪತ್ರಕರ್ತರು ವರದಿ ಮಾಡುವ ಮುನ್ನ ಮುಂದಾಗುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಬದಲಾವಣೆಗಳನ್ನು ಆಲೋಚಿಸಿ ವರದಿ ಮಾಡಬೇಕು ಇದರಿಂದ ವರದಿಗೆ ಫಲಶ್ರುತಿ ಖಂಡಿತಾ ಸಿಗುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿ, “ಸಮಾಜದ ಧ್ವನಿಯಾಗಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ವರದಿಗಾರರು ಸದಾ ಕ್ರಿಯಾಶೀಲರಾಗಿದ್ದು, ಯಾವುದೇ ವಿಷಯವಾಗಲಿ ಅದನ್ನು ಪರಿಶೀಲಿಸಿ, ದೂರದೃಷ್ಟಿಯಿಂದ ಸುದ್ದಿ, ಲೇಖನಗಳನ್ನು ನೀಡುತ್ತಾರೆ. ಜಿಲ್ಲೆಯಲ್ಲಿ ಬರೆದ ಅನೇಕ ಸುದ್ದಿಗಳು ರಾಜ್ಯಮಟ್ಟದ ಸುದ್ದಿಗಳಾಗುತ್ತವೆ. ಜಿಲ್ಲೆಯಲ್ಲಿ ಅಧಿಕಾರಿ ವರ್ಗ ಹಾಗೂ ಪತ್ರಕರ್ತರ ಮದ್ಯ ಒಳ್ಳೆಯ ಬಾಂಧವ್ಯವಿದೆ” ಎಂದು ಹೇಳಿದರು.