ಪತ್ರಿಕಾ ದಿನಾಚರಣೆ : ಅಧಿಕಾರಿಗಳೊಂದಿಗೆ ಸಂವಾದ

ಮುಧೋಳ,ಜು.27: ಪತ್ರಿಕಾ ದಿನಾಚರಣೆಯ ನಿಮಿತ್ಯವಾಗಿ ಮುಧೋಳ ತಾಲೂಕಾ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ಮಂಗಳವಾರ ದಿ. 26 ರಂದು ನಗರದ ಕಾನಿಪ ಕಾರ್ಯಾಲಯದಲ್ಲಿ ಜರುಗಿತು.
ಕಾರ್ಯಕ್ರಮವನ್ನು ತಹಶೀಲದಾರ ವಿನೋದ ಹತ್ತಳ್ಳಿ ಉದ್ಘಾಟಿಸಿದರು. ತಾಪಂ ಕಾನಿ ಅಧಿಕಾರಿ ಕಿರಣ ಘೋರ್ಪಡೆ, ಸಿಪಿಐ ಅಯ್ಯನಗೌಡ ಪಾಟೀಲ, ಪೌರಾಯುಕ್ತ ಎಸ್.ಜಿ.ಅಂಬಿಗೇರ, ಅರಣ್ಯಾಧಿಕಾರಿ ಶಿವಪುತ್ರ ತಳವಾರ ಅತಿಥಿಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ ವಹಿಸಿದ್ದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಮುಧೋಳ-ಲೋಕಾಪೂರ ಭಾಗದ ಪತ್ರಕರ್ತರು ಸಾರ್ವಜನಿಕರ ಕುಂದು-ಕೊರತೆಗಳ ಕುರಿತು ಪ್ರಶ್ನೆಗಳ ಸುರಿಮಳೆಗೈಯುವುದರ ಮೂಲಕ ಅಧಿಕಾರಿಗಳ ಗಮನ ಸೆಳೆದರು.
ಪತ್ರಕರ್ತರಾದ ಗಣೇಶ ಮೇತ್ರಿ ಹಾಗೂ ಮಹಾಂತೇಶ ಕರೆಹೊನ್ನ ನಗರದಲ್ಲಿ ನಡೆದಿರುವ ಕೆರೆಗಳ ಅತಿಕ್ರಮಣ, ನಗರದ ಜನತೆಗೆ ಅಸಮರ್ಪಕ ಕುಡಿಯುವ ನೀರಿನ ಪೂರೈಕೆಯ ಕುರಿತು ತಹಶೀಲದಾರ ಹಾಗೂ ಪೌರಾಯುಕ್ತರಿಗೆ ಪ್ರಶ್ನಿಸಿದಾಗ ಅತಿಕ್ರಮಣಗೊಂಡ ಕೆರೆಗಳ ಕುರಿತು ಈಗಾಗಲೇ ಸರ್ವೇ ಕಾರ್ಯ ಆರಂಭಿಸಲಾಗಿದೆ. ಹಾಗೂ ಕುಡಿಯುವ ನೀರಿನ ಬಗ್ಗೆ ಜಾಕವೆಲ್ ಮೂಲಕ ನೀರನ್ನು ಪೂರೈಸಲು 112 ಕೋಟಿ ಕ್ರಿಯಾಯೋಜನೆಯನ್ನು ಸರ್ಕಾರ ಮಂಜೂರಾಗಿ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮುಧೋಳ ಜನತೆಗೆ 24*7 ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತ ಅಶೋಕ ಕುಲಕರ್ಣಿಯವರು ಸಿಪಿಐಯವರಿಗೆ ಕೆಲವರು ಅನಧೀಕೃತವಾಗಿ ವಾಹನಗಳ ಮೇಲೆ ಪ್ರೆಸ್ ಎಂದು ನಾಪಫಲಕ ಬರೆಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಕಾನಿಪ ಸಂಘದಿಂದ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರಶ್ಸಿಸಿದಾಗ ಅದಕ್ಕೆ ಸಿಪಿಐಯವರು ಉತ್ತರಿಸಿ, ನ್ಯಾಯಾಲಯದ ಆದೇಶದನ್ವಯ ಯಾವುದೇ ಇಲಾಖೆಯವರಾಗಲಿ ತಮ್ಮ ವಾಹನಗಳ ಮೇಲೆ ಬರೆಯಬಾರದೆಂಬ ಆಜ್ಞೆ ಇರುವುದರಿಂದ ಈ ಕುರಿತು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ತಾಲೂಕಿನ ಅಧಿಕೃತ ಮಾನ್ಯತೆ ಹೊಂದಿದ ಪತ್ರಕರ್ತರ ಯಾದಿಯನ್ನು ನೀಡಲು ತಿಳಿಸಿದರು.
ಮಹೇಶ ಬೋಳಿಶೆಟ್ಟಿ ಲೋಕಾಪೂರದಲ್ಲಿ ಪೋಲಿಸ ಅಲ್ಲದ ವ್ಯಕ್ತಿಯೊಬ್ಬ ತನ್ನ ವಾಹನಕ್ಕೆ ಪೋಲಿಸ್ ಎಂದು ಬರೆಯಿಸಿಕೊಂಡು ಮರಳು ವಾಹನಗಳನ್ನು ತಡೆದು ಹಣ ಪಡಯುತ್ತಿದ್ದಾನೆ. ಈ ಕುರಿತು ಸ್ಥಳೀಯ ಪೋಲಿಸ್ ಠಾಣೆಗೆ ಮೌಖಿಕವಾಗಿ ತಿಳಿಸಿದ್ದರೂ ಆತನ ದಿನನಿತ್ಯದ ಕಾರ್ಯಭಾರು ನಿಂತಿಲ್ಲ ಏಕೆ ಎಂದು ಪ್ರಶ್ನಿಸಿದಾಗ ಸಿಪಿಐ ತಬ್ಬಿಬ್ಬಾಗಿ ಮೌನಕ್ಕೆ ಶರಣಾದರು.
ಪತ್ರಿಕಾ ವಿತರಕರಾದ ಕಾಮಣ್ಣ ಪೂಜಾರಿ, ವಾಸೀಮ ತಹಶೀಲದಾರ ಅವರನ್ನು ಸನ್ಮಾನಿಸಲಾಯಿತು.