ಪತ್ರಿಕಾಗೋಷ್ಠಿಗಳೇ ರಾಜಕೀಯ ಚಟುವಟಿಕೆಗಳಂತೆ: ಜಿ.ಪಂ. ಸಿಇಓ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.01- ಸುದ್ದಿಗೋಷ್ಠಿಗಳೇ ರಾಜಕೀಯ ಚಟುವಟಿಕೆಗಳಂತೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನವನ್ನು ವಾರ್ತಾ ಇಲಾಖೆ ಸುಪರ್ದಿಗೆ ಪಡೆಯಲು ಸೂಚನೆ ನೀಡಿದ ಜಿಲ್ಲಾಡಳಿತ ಕ್ರಮದ ವಿರುದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರು ಹಾಗೂ ರೈತಪರ, ಪ್ರಗತಿ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ನೋಟಿಸ್ ನೀಡಿದ ಅಧಿಕಾರಿ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನ ಮುಚ್ಚಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ನೀತಿ ಸಂಹಿತೆ ನೆಪದಲ್ಲಿ ಮಾಧ್ಯಮ ರಂಗದ ಮೇಲೆ ಜಿಲ್ಲಾಡಳಿತ ಗದಾ ಪ್ರಹಾರ ಮಾಡಲು ಮುಂದಾಗಿದೆ. ಚಾಮರಾಜನಗರ ಪತ್ರಿಕಾ ಭವನವನ್ನು ಮುಚ್ಚಿ ಸುಪರ್ದಿಗೆ ಪಡೆಯಲು ವಾರ್ತಾ ಇಲಾಖೆಗೆ ಸ್ವಿಪ್ ಮತ್ತು ಜಿಪಂ ಸಿಇಓ ಆನಂದ ಪ್ರಕಾಶ್ ಮೀನಾ ಸೂಚನೆ ನೀಡಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದು, ಈ ಅಧಿಕಾರ ವಿರುದ್ದ ಕ್ರಮ ಕೈಗೊಳ್ಲಲು ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾ ಕಾರ್ಯಕರ್ತರ ನಿರತ ಪತ್ರಕರ್ತರ ಸಂಘದ ದೂರು ನೀಡಲು ಮುಂದಾಗಿದೆ.
ಭವನಕ್ಕೆ ನೋಟೀಸ್ ಜಾರಿ : ಪ್ರಾಮಾಣಿಕ ಪತ್ರಕರ್ತರ ಸ್ವಾಭಿಮಾನಕ್ಕೆ ಧಕ್ಕೆ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಪತ್ರಿಕಾಭವನದಲ್ಲಿ ನಡೆಯುವ ಸುದ್ದಿಗೋಷ್ಠಿಗಳು ರಾಜಕೀಯ ಚಟುವಟಿಕೆಗಳಂತೆ! ಸುದ್ದಿಗೋಷ್ಠಿ ನಡೆಸುವ ರಾಜಕೀಯ ಮುಖಂಡರು, ಅಭ್ಯರ್ಥಿಗಳು ಆಮಿಷ ಒಡ್ಡುತ್ತಾರೆ ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಎಂದು ನೋಟೀಸ್ ನೀಡುವ ಮೂಲಕ ಜಿ.ಪಂ. ಸಿಇಓ ಪತ್ರಿಕಾಭವನದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತವೆ ಎಂದು ವೃಥಾ ಆರೋಪ ಮಾಡಿರುವುದು ಸರಿಯಲ್ಲ. ಪತ್ರಿಕಾಗೋಷ್ಠಿ ನಡೆಸಲು ಜಿಲ್ಲಾ ಚುನಾವಣಾಧಿಕಾರಿಯಿಂದ ಅನುಮತಿಪಡೆಯಬೇಕು, ಹಾಗು ಪತ್ರಿಕಾಭವನಕ್ಕೆ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚನೆ ನೀಡಿರುವುದು ಪತ್ರಿಕಾ ರಂಗದ ಮೇಲೆ ಅಧಿಕಾರಿ ಶಾಹಿ ದಬ್ಬಾಳಿಕೆಯಾಗಿದೆ.
ಪತ್ರಿಕಾ ಭವನದ ಶಂಕುಸ್ಥಾಪನೆ ಹಾಗು ಉದ್ಘಾಟನಾ ನಾಮ ಫಲಕಗಳನ್ನು ಪೇಪರ್‍ನಿಂದ ಮುಚ್ಚಿದ ಚುನಾವಣಾಧಿಕಾರಿಗಳು. ಜಿಲ್ಲಾ ಚುನಾವಣಾಧಿಕಾರಿಗಳ ಕ್ರಮಕ್ಕೆ ರೈತ ಸಂಘ, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಗತಿ ಪರ ಸಂಘಟನೆಗಳ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಸರ್ಕಾರಿ ಕಚೇರಿಗಳಲ್ಲಿ ರಾಜಕೀಯ ಮುಖಂಡರ ಭೇಟಿ ನಡೆಯುವಂತಿಲ್ಲ. ಆದರೂ ಸಹ ಚಾಮರಾಜನಗರದ ಪತ್ರಕರ್ತರ ಭವನದಲ್ಲಿ ನಿತ್ಯವೂ ರಾಜಕೀಯ ವ್ಯಕ್ತಿಗಳು ಸುದ್ದಿಗೋಷ್ಠಿ, ಸಂವಾದ ನಡೆಸುವ ಮೂಲಕ ಪತ್ರಕರ್ತರಿಗೆ ಆಮಿಷ ಒಡ್ಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗುವಂತಿದೆ. ಹಾಗಾಗಿ ಪತ್ರಕರ್ತರ ಭವನವನ್ನು ಮುಚ್ಚಿ ವಾರ್ತಾ ಇಲಾಖೆಯ ಸುಪರ್ದಿಗೆ ಪಡೆಯಬೇಕು” ಎಂದು ಮಾದರಿ ನೀತಿ ಸಂಹಿತೆ ನೋಡೆಲ್ ಅಧಿಕಾರಿಯಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾರ್ತಾ ಇಲಾಖೆಗೆ ಸೂಚನೆ ನೀಡಿದ್ದಾರೆ.
ಪತ್ರಕರ್ತರ ಭವನ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿರುವುದೇನೋ ನಿಜ. ಅದಾದ ಬಳಿಕ ಅದನ್ನು ಕಾರ್ಯನಿರತ ಪತ್ರಕರ್ತರ ಸಂಘಕ್ಕೋ, ಪ್ರೆಸ್‍ಕ್ಲಬ್‍ಗೋ ಹಸ್ತಾಂತರಿಸಲಾಗುತ್ತದೆ. ಪತ್ರಕರ್ತರ ಭವನದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸುದ್ದಿಗೋಷ್ಠಿ ನಡೆಯುವುದು ಒಂದು ಸಹಜ ವಿದ್ಯಮಾನ. ಅದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಹೇಗಾಗುತ್ತದೆ?
ಒಂದು ವೇಳೆ ಇದೇ ಮಾನದಂಡ ಅನುಸರಿಸಿದರೆ, ದೇಶದ ಎಲ್ಲ ಪತ್ರಕರ್ತರ ಭವನಗಳು, ಪ್ರೆಸ್ ಕ್ಲಬ್‍ಗಳನ್ನು ಮುಚ್ಚಿಸಬೇಕಲ್ಲವೇ? ಪತ್ರಕರ್ತರ ಭವನದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಪತ್ರಕರ್ತರಿಗೆ ಆಮಿಷ ಒಡ್ಡುತ್ತಾರೆ ಎನ್ನುವುದಾದರೆ, ಆಮಿಷಕ್ಕೆ ಬಲಿಯಾಗಲು ಪತ್ರಕರ್ತರು ಕಾದು ನಿಂತಿದ್ದೇವೆಯೇ?
ಒಂದು ವೇಳೆ ರಾಜಕೀಯ ಪಕ್ಷಗಳ ಆಮಿಷಕ್ಕೆ ಬಲಿಯಾಗಿ ಹಣ ತೆಗೆದುಕೊಳ್ಳುವ ಪತ್ರಕರ್ತ, ಪತ್ರಕರ್ತರ ಭವನದಲ್ಲೇ ಕೂತು ತೆಗೆದುಕೊಳ್ಳುತ್ತಾನಾ? ಚುನಾವಣಾ ನೀತಿ ಸಂಹಿತೆ ಇರುವುದರಿಂದ ಹಣ ತೆಗೆದುಕೊಳ್ಳುವಂತಿಲ್ಲ ಎನ್ನುವುದಾದರೆ, ನೀತಿ ಸಂಹಿತೆ ಮುಗಿದ ಮೇಲೆ ಹಣ ತೆಗೆದುಕೊಳ್ಳಬಹುದು ಅಂತಲೇ?
ಅಧಿಕಾರಿಗಳ ಈ ನೋಟೀಸು ಪ್ರಾಮಾಣಿಕ ಪತ್ರಕರ್ತರ ಸ್ವಾಭಿಮಾನವನ್ನೇ ಕೆಣಕಿದಂತಿದೆ. ಹಲವು ಪತ್ರಕರ್ತರು ಅವರ ವೃತ್ತಿಯಲ್ಲಿ ಯಾವುದೇ ಆಮಿಷಕ್ಕೊಳಗಾಗದೇ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅದು ಚುನಾವಣಾ ನೀತಿ ಸಂಹಿತೆಯಂಥ ಸೀಮಿತ ವ್ಯಾಪ್ತಿಗೊಳಪಡುವುದಿಲ್ಲ. ಅದು ತಮ್ಮ ಜೀವನದಲ್ಲೇ ಅಳವಡಿಸಿಕೊಂಡಿರುವ ನೀತಿ ಸಂಹಿತೆ. ಆ ನೀತಿ ಸಂಹಿತೆಯನ್ನು ಯಾರಿಂದಲೂ ಹೇಳಿಸಿಕೊಂಡಿದ್ದಲ್ಲ. ಅದು ಸ್ವಯಂ ತಾವೇ ಅಳವಡಿಸಿಕೊಂಡಿರುವ ನೀತಿ ಸಂಹಿತೆ ಎಂಬುದು, ಅಧಿಕಾರಿಗಳಿಗೆಲ್ಲಿ ತಿಳಿಯಬೇಕು? ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸರ್ಕಾರ ಮಾಡಿರುವ ದಾಳಿ. ಇಂಥದನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಎಲ್ಲರೂ ಖಂಡಿಸಬೇಕಾಗಿದೆ.