ಪತ್ರಕರ್ತ ಹೊಸಮನಿಗೆ ಜಿಲ್ಲಾ ಸಂಘದ ಸಹಾಯ ಹಸ್ತ

ಬೀದರ್: ಮೇ.24:ಇತ್ತಿಚೀಗೆ ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಮನಾಬಾದ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿರುವ ಪರಶುರಾಮ(ಪ್ರಶಾಂತ) ಹೊಸಮನಿ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಧೈರ್ಯ ತುಂಬಲಾಯಿತು.

ನಗರದ ಗುರುನಾನಕ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿರುವ ಪರಶುರಾಮ ಅವರಲ್ಲಿಗೆ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ತೆರಳಿ ನೋವಿನಲ್ಲಿ ಭಾಗಿಯಾಗಿ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಅವರು ವಯಕ್ತಿಕವಾಗಿ ರು.5,000 ಧನ ಸಹಾಯ ನೀಡುವ ಮೂಲಕ ಸಹಾಯ ಹಸ್ತ ತೋರಿದರು.

ಆಸ್ಪತ್ರೆಗೆ ಸಂಬಂಧಿಸಿದ ದಾಖಲೆಗಳು ಸಂಘಕ್ಕೆ ಸಲ್ಲಿಸಿದ್ದೆ ಆದಲ್ಲಿ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಿಂದ ಅನುದಾನ ಕಲ್ಪಿಸಿ ಕೊಡುವ ಪ್ರಯತ್ನ ಮಾಡುವುದಾಗಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಭರವಸೆ ನೀಡಿದರು. ಪತ್ರಕರ್ತರ ಅನಾರೋಗ್ಯದ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಲು ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪತ್ಬಾಂಧವ ವಾಟ್ಸಪ್ ಗ್ರೂಪ್‍ನಿಂದಲೂ ಧನ ಸಹಾಯಕ್ಕೆ ಪ್ರಯತ್ನಿಸಲಾಗುವುದು ಎಂದೂ ಸ್ಥಳದಲ್ಲಿದ್ದ ಐ.ಎಫ್.ಡಬ್ಲ್ಯು.ಜೆ ಸದಸ್ಯರಾದ ಅಪ್ಪಾರಾವ್ ಸೌದಿ ತಿಳಿಸಿದರು. ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಸವರಾಜ ಕಾಮಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ, ಖಜಾಂಚಿ ಎಂ.ಪಿ ಮುದಾಳೆ, ಕಾರ್ಯದರ್ಶಿ ಸುನಿಲಕುಮಾರ ಕುಲಕರ್ಣಿ, ಜಿಲ್ಲಾ ಕಾರ್ಯಕಾರಿ ಸದಸ್ಯ ಶರದ್ ಘಂಟೆ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.