ಪತ್ರಕರ್ತ ವೀರೇಶ್ ಕಟ್ಟೆಮ್ಯಾಗಳಗೆ ಶ್ರದ್ದಾಂಜಲಿ ಮಕ್ಕಳ ಶಿಕ್ಷಣಕ್ಕೆ ಸಹಕರಿಸಲು ಆಶಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.26: ಇತ್ತೀಚೆಗೆ ಅಕಾಲಿಕವಾಗಿ ಸಾವನ್ನಪ್ಪಿದ ವಿಜಯಕರ್ನಾಟಕ ಉಪ ಸಂಪಾದಕ ಜಿ.ಕೆ.ವೀರೇಶ್ ಕಟ್ಟೇಮ್ಯಾಗಳ ಅವರ ಶ್ರದ್ದಾಂಜಲಿ ಸಭೆ ಇಂದು ನಗರದ ಕನ್ನಡ ಭವನದಲ್ಲಿ ನಡೆಯಿತು.
ವೀರೇಶ ಅವರ ಭಾವಚಿತ್ರಕ್ಕೆ ಹಾಲಿ ಮತ್ತು ನಿವೃತ್ತ ಪತ್ರಕರ್ತರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕುಟುಂಬದ ಸದಸ್ಯರು ಪುಷ್ಪನಮನ ಸಲ್ಲಿಸಿದರು.
ವೀರೇಶ್ ಅವರ ಪತ್ನಿ  ಕೆ.ಲತಾ ಅವರಿಗೆ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡಿದ 10 ಸಾವಿರ ರೂಗಳ ಚೆಕನ್ನು ಸಂಘದ ರಾಜ್ಯ ಕಾರ್ಯಕಾರಿ ಸಮಿತಿ   ಸದಸ್ಯ ವೀರಭದ್ರಗೌಡ ಮತ್ತು ಸದಸ್ಯರು  ಸಮರ್ಪಿಸಿದರು.
ಇದೇ ವೇಳೆ  ಜಿ.ಕೆ.ವೀರೇಶ್  ಅವರ ಕುಟುಂಬಕ್ಕೆ ವಿಜಯನಗರದ ಕಾರ್ಯನಿರತ ಪತ್ರಕರ್ತರ ಸಂಘದಿಂದ 25 ಸಾವಿರ ರೂಗಳ ಅರ್ಥಿಕ ನೆರವಿನ ಚೆಕನ್ನು ಸಂಘದ ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಅವರು ಸಮರ್ಪಿಸಿದರು.
ಇನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬಳ್ಳಾರಿ, ಕುರುಗೋಡು, ಸಿರಿಗೇರಿ, ಎಮ್ಮಿಗನೂರು ಮೊದಲಾದ ಸ್ಥಳಗಳ ಪತ್ರಕರ್ತರು, ಅಖಿಲಭಾರತ ವೀರಶೈವ ಮಹಾಸಭಾ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ನೀಡಿದ 67708 ರೂಗಳ ನಗದನ್ನು ಸಹ ನೀಡಲಾಯ್ತು.
ಸಮಾರಂಭದಲ್ಲಿ ಮಾತನಾಡಿದ ವಿಜಯ ಕರ್ನಾಟಕ ಬಳ್ಳಾರಿ ಕಚೇರಿಯ ಮುಖ್ಯಸ್ಥ ಗಂಗಾಧರ ಬಂಡಿಹಾಳ, ರಾಜುಗೌಡ, ಹಿರಿಯ ಪತ್ರಕರ್ತ ಎಂ.ಅಹಿರಾಜ್, ಇತಿಹಾಸ ಅಕಾಡೆಮಿಯ ಟಿ.ಹೆಚ್.ಎಂ.ಬಸವರಾಜ್, ಸಂಗನಕಲ್ಲಿನ ಈಶ್ವರ್, ರಂಗತೋರಣದ ಅಡವಿಸ್ವಾಮಿ, ಚಾನಾಳ್ ಶೇಕರ್, ಹಿರಿ ಕಿರಿಯ ಪತ್ರಕರ್ತರು ವೀರೇಶ್ ನಿಧನದ ಬಗ್ಗೆ ಶೋಕ ವ್ಯಕ್ತಪಡಿಸಿದರು.
ಮಕ್ಕಳ ವಿದ್ಯಾಭ್ಯಾಸ ಮತ್ತು ಬದುಕಿಗೆ ಅಗತ್ಯವಾದ ಸಹಕಾರವನ್ನು ನೀಡಲು ಮತ್ತು ಶಾಸಕರ, ಸಚಿವರ ಸಹಕಾರದಿಂದ ಉದ್ಯೋಗ ಕಲ್ಪಿಸಿಕೊಡಬೇಕೆಂಬ ಅಭಿಪ್ರಾಯ ವ್ಯಕ್ತವಾಯ್ತು.