ಪತ್ರಕರ್ತ ಆರ್ನಬ್ ಬಂಧನ

ಮುಂಬೈ, ನ. ೪- ಟಿಆರ್‌ಪಿ ಹಗರಣದಲ್ಲಿ ಸಿಲುಕಿಕೊಂಡಿರುವ ಹಿರಿಯ ಪತ್ರಕರ್ತ ಮತ್ತು ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಆರ್ನಬ್ ಗೋಸ್ವಾಮಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ೨೦೧೮ರಲ್ಲಿ ನಡೆದಿದ್ದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಿಐಡಿ ತಂಡವು ಆರ್ನಬ್ ಗೋಸ್ವಾಮಿಅವರನ್ನು ಇಂದು ವಶಕ್ಕೆ ಪಡೆದುಕೊಂಡಿದೆ.
ಮಹಾರಾಷ್ಟ್ರದ ಅಲಿಬಾಗ್‌ನ ನಿವಾಸಿ ೫೩ ವರ್ಷದ ಇಂಟಿರಿಯಲ್ ಡಿಸೈನರ್ ಅನ್ವರ್ ನಾಯಕ್ ಮತ್ತು ಅವರ ತಾಯಿ ಕುಮುದಾನಾಯ್ಕ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ನಬ್ ಗೋಸ್ವಾಮಿ ಅವರನ್ನು ಸಿಐಡಿ ಪೊಲೀಸರು ಇಂದು ಬೆಳಗ್ಗೆ ವಶಕ್ಕೆ ಪಡೆದುಕೊಂಡಿದ್ದಾರೆ.
ಇಂಟಿ ಅನ್ವರ್ ನಾಯಕ್ ಮತ್ತು ಅವರ ತಾಯಿ ೨೦೧೮ ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಸ್ಥಳದಲ್ಲಿ ಪೊಲೀಸರಿಗೆ ದೊರೆತಿದ್ದ ಪತ್ರದಲ್ಲಿ ಹಿರಿಯ ಪತ್ರಕರ್ತ ಆರ್ನಬ್ ಗೋಸ್ವಾಮಿ ತಮಗೆ ೫.೪೦ ಕೋಟಿ ರೂ.ಗಳನ್ನು ಪಾವತಿಸಬೇಕಿತ್ತು. ಅವರು ಹಣ ನೀಡದ ಕಾರಣ ನಮ್ಮ ಕುಟುಂಬ ತೀವ್ರ ಆರ್ಥಿಕ ತೊಂದರೆಗೆ ಒಳಗಾಯಿತು ಎಂದು ಅವರು ಪತ್ರದಲ್ಲಿ ಬರೆದುಕೊಂಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಅಲಿಬಾಗ್ ಪೊಲೀಸರು ೨೦೧೮ ರಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ೨೦೨೦ ರ ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ಈ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಪೊಲೀಸರು ಇಂದು ಮುಂಬೈನಲ್ಲಿರುವ ಆರ್ನಬ್ ಗೋಸ್ವಾಮಿ ಅವರ ನಿವಾಸಕ್ಕೆ ಬಂದು ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗಾಗಿ ಆಲಿಬಾಗ್‌ಗೆ ಕರೆದೊಯ್ದಿದ್ದಾರೆ.
ಹಲ್ಲೆ ದೂರು
ಮಹಾರಾಷ್ಟ್ರ ಪೊಲೀಸರು ಇಂದು ತಮ್ಮ ನಿವಾಸಕ್ಕೆ ಬಂದು ತಮ್ಮ ಕುಟುಂಬಸ್ಥರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರ್ನಬ್ ಆರೋಪಿಸಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬರಬೇಕಿದೆ ಎಂದು ಹೇಳಿರುವ ಸಿಐಡಿ ಪೊಲೀಸರು ಇಂದು ಬೆಳಗ್ಗೆಯೇ ತಮ್ಮ ಮನೆಗೆ ನುಗ್ಗಿ ತಮ್ಮ ಮೇಲೆ, ಮನೆಯಲ್ಲಿರುವ ವಯಸ್ಸಾದ ತಮ್ಮ ಅತ್ತೆ, ಮಾವ, ಪತ್ನಿ, ಮಗನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರ್ನಬ್ ದೂರಿದ್ದಾರೆ.
ಖಂಡನೆ
ರಿಬಪ್ಲಿಕ್ ಟಿವಿಯ ಪ್ರಧಾನ ಸ ಂಪಾದ ಆರ್ನಬ್ ಗೋಸ್ವಾಮಿ ಅವರ ಮೇಲಿನ ಹಲ್ಲೆ, ಪೊಲೀಸರು ಅವರನ್ನು ಥಳಿಸಲು ಮುಂದಾಗಿರುವ ಕ್ರಮವನ್ನು ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಮಹಾರಾಷ್ಟ್ರ ಪೊಲೀಸರ ಈ ನಡೆ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಅವರು ಟೀಕಿಸಿದ್ದಾರೆ.
ಪತ್ರಕರ್ತರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ಮಹಾರಾಷ್ಟ್ರ ಪೊಲೀಸರ ಕ್ರಮ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುವಂತಿದೆ ಎಂದು ಪ್ರಕಾಶ್ ಜಾವ್ಡೇಕರ್ ಟ್ವೀಟರ್‌ನಲ್ಲಿ ಹೇಳಿದ್ದಾರೆ.