ಪತ್ರಕರ್ತ ಆರ್ನಬ್ ಗೋಸ್ವಾಮಿ ಬಂಧನ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಕಲಬುರಗಿ.ನ.05: ರಾಷ್ಟ್ರವಾದಿ ಪತ್ರಕರ್ತ ಆರ್ನಬ್ ಗೋಸ್ವಾಮಿ ಅವರನ್ನು ಮಹಾರಾಷ್ಟ್ರ ಸರ್ಕಾರ ಕಾನೂನು ಬಾಹಿರವಾಗಿ ಬಂಧಿಸಿದೆ ಎಂದು ಆರೋಪಿಸಿ ನಗರ ಹಾಗೂ ಗ್ರಾಮಾಂತರ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಗುರುವಾರ ಸಂಜೆ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿದರು.

ಎದೆಗಾರಿಕೆಯ ಪತ್ರಕರ್ತ ಆರ್ನಬ್ ಗೋಸ್ವಾಮಿ ಅವರನ್ನು ಬಂಧಿಸುವ ಮೂಲಕ ಅಸಭ್ಯ ವರ್ತನೆ ಹಾಗೂ ಹಲ್ಲೆ ಮಾಡಲಾಗುತ್ತಿದ್ದು, ಕೂಡಲೇ ರಾಷ್ಟ್ರಪತಿಗಳು ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ್ ಠಾಕ್ರೆಯವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರೆತಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮೇಲೆ ತಪ್ಪು ಮತ್ತು ಟೀಕೆ ಮಾಡುತ್ತಿರುವ ಪತ್ರಕರ್ತರ ಮೇಲೆ, ರಾಷ್ಟ್ರವಾದಿ ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಮೇಲೂ ಹಾಗೂ ಜನಸಾಮಾನ್ಯರ ಮೇಲೂ ಮಹಾರಾಷ್ಟ್ರ ಸರ್ಕಾರವು ಪೋಲಿಸರ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸುತ್ತಿದೆ ಎಂದು ಅವರು ಆರೋಪಿಸಿದರು.
ಇಂತಹ ಸರ್ವಾಧಿಕಾರಿ ಹಾಗೂ ಗೂಂಡಾರೂಪಿ ಮಹಾರಾಷ್ಟ್ರ ಸರ್ಕಾರವನ್ನು ರಾಷ್ಟ್ರಪತಿಗಳು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ್ ತೆಗನೂರು ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಿವಾ ಅಷ್ಟಗಿ, ಶ್ರೀನಿವಾಸ್ ದೇಸಾಯಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಅಪ್ಪು ಕಣಕಿ, ರಾಜು ಚವ್ಹಾಣ್, ಮಹೇಶ್ ಚವ್ಹಾಣ್, ಮಲ್ಲು ಉದನೂರ್, ರಾಘವೇಂದ್ರ ಚಿಂಚನಸೂರ್, ಮದನ್ ಯಾಕಾಪೂರ್, ರಾಹುಲ್ ಬಬಲಾದ್, ಅವಿನಾಶ್ ಪಾಟೀಲ್, ಸೌರಬ್ ರಂಗದಾಳ್, ಜಗದೀಶ್ ಪಾಟೀಲ್, ರೇವಣಯ್ಯಸ್ವಾಮಿ, ಮೇಘರಾಜ್ ಅರಳಿ, ಶಿರೀಶ್ ರಾಠೋಡ್ ಮುಂತಾದವರು ಪಾಲ್ಗೊಂಡಿದ್ದರು.