ಪತ್ರಕರ್ತ ಅರ್ನಬ್ ಬಂಧನ ಖಂಡಿಸಿ ಎಬಿವಿಪಿ ಪ್ರತಿಭಟನೆ

ಬಳ್ಳಾರಿ, ನ.6: ಮಹಾರಾಷ್ಟ್ರದ ಪೊಲೀಸರು ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಬಂಧನ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರ ಪೊಲೀಸರ ಈ‌ ಕಾರ್ಯ ತುರ್ತು ಪರಿಸ್ಥಿತಿಯ ದಿನಗಳಲ್ಲಿನ ವಾಕ್ ಸ್ವಾತಂತ್ಯದ ಮೇಲೆ ದಾಳಿ ಮಾಡಿರುವ ಹಾಗಿದೆ.
ದುರ್ಭಾವನೆಯಿಂದ ಮತ್ತು ಕಾನೂನು ಬಾಹಿರವಾಗಿ ಬಂಧಿಸಿರುವುದು ದೇಶದ ಮಾಧ್ಯಮ ಕ್ಷೇತ್ರಕ್ಕೆ ಆಘಾತವಾಗಿದೆ. ಮಹಾರಾಷ್ಟ್ರ ಸರಕಾರದ ಈ ಕೃತ್ಯ ಪತ್ರಿಕಾ ಮಾಧ್ಯಮದ ಸ್ವಾತಂತ್ರ್ಯವನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಮುಗಿಸುವ ಷಡ್ಯಂತ್ರವಾಗಿದೆ. ಅರ್ನಬ್ ಅವರು ಪಾಲಘರ್ ನಲ್ಲಿ ಸಾಧುಗಳ ಹತ್ಯೆ ನಡೆದಿರುವ ಬಗ್ಗೆ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅನೇಕ ಕಾನೂನು ಬಾಹಿರ ಕೃತ್ಯಗಳ ಕುರಿತಾಗಿ ವರದಿ ಮಾಡಿರುವುದು ಪ್ರಜಾಪ್ರಭುತ್ವ ಸರಕಾರಕ್ಕೆ ಅಶೋಭನೀಯವಾಗಿದೆ.
ಮಹಾರಾಷ್ಟ ಪೊಲೀಸರಿಂದ ತನಿಖೆಯ ನಂತರ 2018 ರಲ್ಲಿ ನಡೆದ ಆತ್ಮಹತ್ಯೆಯ ಕೇಸ್ ಅಂತ್ಯಕಂಡಿತ್ತು. ಆದರೆ ಸೇಡು ತೀರಿಸಿಕೊಳ್ಳುವ ಉದ್ದೇಶಕ್ಕಾಗಿ ಆ ಕೇಸನ್ನು ಮತ್ತೆ ಓಪನ್ ಮಾಡಿ ಮಹಾರಾಷ್ಟ್ರ ಸರಕಾರವು ತನ್ನ ಪ್ರಜಾಪ್ರಭುತ್ವ ವಿರೋಧಿ ಮುಖವಾಡವನ್ನು ಬಯಲು ಮಾಡಿಕೊಂಡಿದೆ. ಬಂಧನದ ಸಂಧರ್ಭದಲ್ಲಿ ಅರ್ನಾಬ್ ಗೋಸ್ವಾಮಿಯವರ ಮನೆಯ ಸದಸ್ಯರೊಂದಿಗೆ ಪೊಲೀಸರು ನಡೆದುಕೊಂಡ ಪರಿಯು ತುರ್ತುಪರಿಸ್ಥಿಯ ಸಂದರ್ಭದಲ್ಲಿನ ಭಯಾನಕ ಕರಾಳದ ದಿನಗಳನ್ನು ನೆನಪಿಸಿಕೊಡುತ್ತಿದೆ ಎಂದಿದ್ದಾರೆ.
ಅರ್ನಬ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಮತ್ತು ಮಹಾರಾಷ್ಟ್ರ ಸರಕಾರದ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ನಿಲ್ಲಿಸುವಂತೆ ಎಬಿವಿಪಿಯಿಂದ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಕೌಶಿಕ್ ನಗರ ಸಂಘಟನಾ ಕಾರ್ಯದರ್ಶಿ ರುದ್ರೇಶ್, ನವೀನ್, ಶ್ರೀನಿವಾಸ್, ಶ್ರೀಧರ್, ಪ್ರಶಾಂತ್ ಮತ್ತಿತರರಿದ್ದರು.
ಕಳೆದ ತಿಂಗಳು ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಪವರ್ ಟಿವಿಯನ್ನು ಸಹ ಪೊಲೀಸರಿಂದ ದೌರ್ಜನ್ಯ ಮಾಡಿ ಬಂದ್ ಮಾಡಿಸಿತ್ತು. ಇದನ್ನು‌ಮಾತ್ರ ಎಬಿವಿಪಿ ಖಂಡಿಸರಲಿಲ್ಲ.