ಕೋಲಾರ,ಜು,೫- ಪತ್ರಕರ್ತರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ೨.೬೮ ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರ ಅನುಕೂಲಕ್ಕಾಗಿ ಆಪದ್ದನನಿಯನ್ನು ಆರಂಭಿಸುವುದಾಗಿ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಪ್ರಕಟಿಸಿದರು.
ಕೋಲಾರ ಚಿಕ್ಕಬಳ್ಳಾಪುರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಕೆಜಿಎಫ್‌ನ ಹಿರಿಯ ಪತ್ರಕರ್ತ ಎನ್.ಆರ್.ಪುರುಷೋತ್ತಮ್ ನೀಡಿದ ಸಲಹೆಯನ್ನು ಅಂಗೀಕರಿಸಿ ಆಪತ್ ಧನ ನಿಧಿ ಆರಂಭಿಸಿ ಅಗತ್ಯ ಸಂದರ್ಭಗಳಲ್ಲಿ ಪತ್ರಕರ್ತರಿಗೆ ನೆರವಾಗಲು ಅಗತ್ಯ ಕ್ರಮವಹಿಸುವುದಾಗಿ ಘೋಷಿಸಿದರು.
ಆಪತ್ ಧನ ನಿಧಿಗೆ ಸಂಘದ ಎಲ್ಲಾ ೩೧೯ ಸರ್ವ ಸದಸ್ಯರಿಂದಲೂ ನಿಗದಿತ ದೇಣಿಗೆ ವಸೂಲು ಮಾಡಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಆಪತ್ ಕಾಲದಲ್ಲಿ ಬಳಸಿಕೊಳ್ಳಬೇಕೆಂದು ಪತ್ರಕರ್ತ ರಾಜೇಂದ್ರಸಿಂಹ ಸಲಹೆ ನೀಡಿದರು.
ಎನ್.ಆರ್.ಪುರುಷೋತ್ತಮ್ ಮಾತನಾಡಿ, ಸಹಕಾರ ಸಂಘದ ಸಾಲದ ಲೆಕ್ಕವನ್ನು ಸಮರ್ಪಕವಾಗಿ ನಿರ್ವಹಿಸಲು ಕಂಪ್ಯೂಟರೀಕರಣ ಮಾಡಬೇಕೆಂದು ಸಲಹೆ ನೀಡಿ, ಸಂಘದ ಸಾಲದ ಕಂತುಗಳನ್ನು ೧೨ ರಿಂದ ೨೦ ತಿಂಗಳುಗಳಿಗೆ ಹೆಚ್ಚಿಸಬೇಕೆಂದರು.ಹಿರಿಯ ಸದಸ್ಯ ಅಬ್ಬಣಿ ಶಂಕರ್ ಮಾತನಾಡಿ, ಸಂಘವು ನೀಡುವ ಸಾಲಕ್ಕೆ ವಿಮೆ ಮಾಡಿಸಬೇಕೆಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಪತ್ರಕರ್ತರ ವಿವಿಧೋದ್ದೇಶ ಸಹಕಾರಸಂಘಕ್ಕೆ ಮುಂದಿನ ಆಗಸ್ಟ್ ತಿಂಗಳಿನಲ್ಲಿ ಚುನಾವಣೆ ನಡೆಯಬೇಕಾಗಿರುವುದರಿಂದ ಜುಲೈ ಮಾಸದಲ್ಲಿಯೇ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿದೆ, ಮುಂದಿನ ಚುನಾವಣೆಯಲ್ಲಿಯೂ ಸರ್ವ ಸದಸ್ಯರು ಅವಿರೋಧವಾಗಿ ಸಮಿತಿ ಸದಸ್ಯರ ಆಯ್ಕೆಗೆ ಸಹಕರಿಸುವ ಮೂಲಕ ಚುನಾವಣಾ ವೆಚ್ಛದ ಹೊರೆ ಸಂಘದ ಮೇಲೆ ಬೀಳದಂತೆ ಮಾಡಬೇಕೆಂದು ಸದಸ್ಯರಲ್ಲಿ ಕೋರಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಹಾಗೂ ಸಹಕಾರ ಸಂಘದ ನಿರ್ದೇಶಕರಾದ ಎಚ್.ಎನ್.ಮುರಳೀಧರ್, ವಾಸುದೇವಹೊಳ್ಳ, ವಿ.ಮುನಿರಾಜು, ಎಸ್.ಕೆ.ಚಂದ್ರಶೇಖರ್, ಎ.ಜಿ.ಸುರೇಶ್‌ಕುಮಾರ್, ಮಾಮಿ ಪ್ರಕಾಶ್, ಮಾಲೂರು ನಾರಾಯಣಪ್ಪ, ಮುಳಬಾಗಿಲು ನಾಗರಾಜಯ್ಯ, ಬಂಗಾರಪೇಟೆ ಕೆ.ರಾಮಮೂರ್ತಿ ಇತರರು ವೇದಿಕೆಯಲ್ಲಿದ್ದರು.
ಸಂಘದ ಉಪಾಧ್ಯಕ್ಷ ಕೋ.ನಾ.ಮಂಜುನಾಥ್ ಸ್ವಾಗತಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಕಾರಿ ಗಂಗಾಧರ್ ವಂದಿಸಿದರು.