ಪತ್ರಕರ್ತರ ಸಮಸ್ಯೆಗಳ ಈಡೇರಿಸಲು ಜನವರಿಯಿಂದ  ಕಾನೂನು ಹೋರಾಟ

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.20: ರಾಜ್ಯದಲ್ಲಿರುವ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ಡಿಸೆಂಬರ್ ಕೊನೆಯವರೆಗೂ ರಾಜ್ಯ ಸರ್ಕಾರಕ್ಕೆ ಗಡುವು ನೀಡಲಾಗುತ್ತಿದ್ದು, ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು  ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್, ಸಿಎಂ ಸಿದ್ದರಾಮಯ್ಯ ವಿರುದ್ಧ ಪಿಐಎಲ್ ಸೇರಿದಂತೆ ಮಾನ್ಯತಾ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ವಾರ್ತಾ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಹಮ್ಮಿಕೊಳ್ಳಲಾಗು ವುದು ಎಂದು ಹೇಳಿದರು.ರಾಜ್ಯದಲ್ಲಿ 800ಕ್ಕೂ ಅಧಿಕ ಪತ್ರಿಕೆಗಳು ಮಾನ್ಯತೆ ಪಡೆದಿದ್ದು, ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಆಗಿಲ್ಲ. ಈ ರೀತಿ ನೋಂದಣಿ ಅಗದ ಕಾರಣ ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಹೇಳಿದರು.ರಾಜ್ಯ ಸರ್ಕಾರದಿಂದ ಪತ್ರಕರ್ತರು ಪಡೆಯಬೇಕಾದ ಸವಲತ್ತುಗಳನ್ನು ಪಡೆಯಲು ಎಲ್ಲಾ ಸಂಘಟನೆಗಳು ಒಂದಾಗಬೇಕು. ಈಗಾಗಲೇ ಹಲವಾರು ಬಾರಿ ಪತ್ರಕರ್ತರ ಸಮಸ್ಯೆ ಕುರಿತು ಮುಖ್ಯ ಮಂತ್ರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಗೆ ರಾಷ್ಟ್ರೀಯ ಪತ್ರಕರ್ತರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಿ.ವಾಸುದೇವ್, ಜಿ.ಹೆಚ್.ನಾಗರಾಜ್, ರಮೇಶ್ ಚಿಕ್ಕಮರಡಿ, ಸಂತೋಷ್, ಡಿ.ಗಿರೀಶ್ ಉಪಸ್ಥಿತರಿದ್ದರು.