ಪತ್ರಕರ್ತರ ಸಂಘದಿಂದ ಪ್ರತಿಭಟನೆ


ಹುಬ್ಬಳ್ಳಿ,ಮಾ.15: ಪತ್ರಕರ್ತರನ್ನು ಹೀನಾಯ ಶಬ್ದಗಳಿಂದ ನಿಂದಿಸಿದ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆ ವಿರೋಧಿಸಿ ಹಾಗೂ ಕಾಂಗ್ರೆಸ್ ರಾಜ್ಯ ಸಭೆ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ಪತ್ರಕರ್ತರ ಜೊತೆಗೆ ಅನುಚಿತವಾಗಿ ವರ್ತಿಸಿದ್ದನ್ನು ಖಂಡಿಸಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ನಗರದ ತಹಶಿಲ್ದಾರ ಕಚೇರಿ ಆವರಣದಲ್ಲಿ ಸಮಾವೇಶಗೊಂಡು ಇಬ್ಬರು ಸಂಸದ್ವರ ಬೇಜವಾಬ್ದಾರಿ ಹೇಳಿಕೆ ಹಾಗೂ ವರ್ತನೆ ಪ್ರಜಾಪ್ರಭುತ್ವ ಮೂಲತತ್ವಕ್ಕೆ ಧಕ್ಕೆ ತರುವಂತಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೆ ಗುರುತಿಸಿಕೊಂಡಿರುವ ಮಾಧ್ಯಮದ ಮೇಲೆ ಈ ರೀತಿಯ ದೌರ್ಜನ್ಯಗಳು ಇತ್ತೀಚಿನ ವರ್ಷಗಳಲ್ಲಿ ಚುನಾಯಿತ ಪ್ರತಿನಿಧಿಗಳಿಂದಲ್ಲೇ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.
ಇಂತಹ ಜನಪ್ರತಿನಿಧಿಗಳನ್ನು ಎಚ್ಚರಿಸುವದು ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲವೇ ಕೆಲವು ರಾಜಕಾರಣಿಗಳಿಂದ ಇಂತಹ ಅನುಚಿತ ಪ್ರಸಂಗಗಳು ಪುನರಾವರ್ತನೆಯಾಗುವ ಸಾಧ್ಯತೆಯಿವೆ ಹಾಗಾಗಿ ಕೂಡಲೇ ಸಂಸದದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೋಚನೇಶ ಹೂಗಾರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಗಣಪತಿ ಗಂಗೊಳ್ಳಿ, ಸಂಘದ ಕಾರ್ಯದರ್ಶಿಗಳಾದ ಸುಶೀಲೆಂದ್ರ ಕುಂದರಗಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.