ಅಫಜಲಪುರ:ಜೂ.30: ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಕೀಲ್ ಚೌಧರಿ ಅವರ ಅಧಿಕಾರಾವಧಿ ಮುಕ್ತಾಯದ ನಂತರ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಇನ್ನುಳಿದ ಅವಧಿಗಾಗಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಿರೇಮಠ ಅವರಿಗೆ ನೇಮಕ ಮಾಡಲಾಯಿತು.
ನಂತರ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಮಾತನಾಡಿ ಅಫಜಲಪುರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕದಲ್ಲಿ ನೆರವೇರದ ಕಾರ್ಯಗಳನ್ನು ಕೇವಲ ಒಂದೇ ವರ್ಷದಲ್ಲಿ ಶಕೀಲ್ ಚೌದರಿ ಅವರು ನೆರವೇರಿಸುವ ಮೂಲಕ ಸಂಘದ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ಪಡಿಸಿದ ಅವರು ನೂತನ ಅಧ್ಯಕ್ಷರು ಹಿಂದಿನ ಅಧ್ಯಕ್ಷರೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಅವರ ಸಲಹೆ ಸೂಚನೆಯ ಮೇರೆಗೆ ಜಂಟಿಯಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕು ಅಲ್ಲದೆ ಪತ್ರಕರ್ತರಾದವರ ಸಾಮಾಜಿಕ ಜವಾಬ್ದಾರಿಗಳೇನು? ಸಾರ್ವಜನಿಕ ಸಮಸ್ಯಾತ್ಮಕ ವರದಿಗಳಿಗೆ ಹೇಗೆ ಸ್ಪಂದಿಸಬೇಕು ಎಂಬಿತ್ಯಾದಿ ಅನೇಕ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದ ಅವರು ಸಂಘದ ನಿಯಮಗಳ ವಿರುದ್ಧ ಯಾರಾದರು ನಡೆದುಕೊಂಡರೆ ಅವರ ಸಂಘದ ಸದಸ್ಯತ್ವವನ್ನು ರದ್ದು ಮಾಡಿ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಸಂಘದ ಉಪಾಧ್ಯಕ್ಷ ಅರುಣಕುಮಾರ ಹೂಗಾರ ಮಾತನಾಡಿ ಕಳೆದ ಒಂದು ವರ್ಷದ ಹಿಂದೆ ಶಕೀಲ್ ಚೌಧರಿ ಅವರು ಅಧ್ಯಕ್ಷರಾದ ಬಳಿಕ ಮೊಟ್ಟ ಮೊದಲ ಬಾರಿಗೆ ಪತ್ರಿಕಾ ಭವನ ನಿರ್ಮಾಣ ಮಾಡಿ ಅದಕ್ಕೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ. ತಾಲೂಕು ಮಟ್ಟದಲ್ಲಿ ಬೃಹತ್ ಪತ್ರಿಕಾ ದಿನಾಚರಣೆಯನ್ನು ಆಚರಿಸುವ ಮೂಲಕ ಅಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುರುಗೇಶ ನಿರಾಣಿ, ಕೆಕೆಆರ್‍ಡಿಬಿ ಅಧ್ಯಕ್ಷರಾಗಿದ್ದ ದತ್ತಾತ್ರೇಯ ಪಾಟೀಲ್ ರೇವೂರ, ಕಲಬುರ್ಗಿ ಜಿಲ್ಲಾಧಿಕಾರಿಗಳು, ಶಾಸಕರು ಹೀಗೆ ಅನೇಕ ಗಣ್ಯ ವ್ಯಕ್ತಿಗಳನ್ನು ಪತ್ರಿಕಾ ದಿನಾಚರಣೆಗೆ ಆಹ್ವಾನಿಸಿ ಕಾರ್ಯಕ್ರಮದ ಗರಿಮೆಯನ್ನು ಹೆಚ್ಚಿಸಿದರು.
ಸಂಘದ ಸದಸ್ಯರ ಹುಟ್ಟುಹಬ್ಬದ ಸಂದರ್ಭದಲ್ಲಿ ಜನ್ಮ ದಿನಾಚರಣೆ ಹಾಗೂ ಸದಸ್ಯರು ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಸಂದರ್ಭದಲ್ಲಿ ಸಂಘದ ವತಿಯಿಂದ ಗೌರವ ಸನ್ಮಾನ, ಹಿರಿಯ ಪತ್ರಕರ್ತರಿಗೆ ಸನ್ಮಾನ ಹೀಗೆ ಸಂಘದ ಎಲ್ಲ ಸದಸ್ಯರಿಗೆ ಪ್ರೇರೇಪಿಸುವ ಮೂಲಕ ಅವರ ಕೆಲಸ ಕಾರ್ಯಗಳಿಗೆ ಉತ್ತೇಜನ ನೀಡಿದ್ದಾರೆ.
ಸಂಘದ ಸದಸ್ಯರ ಆರೋಗ್ಯ ಕ್ಷೀಣಿಸಿದ ಸಂದರ್ಭದಲ್ಲಿ ಅವರಿಗೆ ಜಿಲ್ಲಾ ಸಂಘದ ಸಹಕಾರದೊಂದಿಗೆ ಆರ್ಥಿಕ ನೆರವು, ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ, ಪತ್ರಿಕಾ ಭವನದ ಸುತ್ತಮುತ್ತ ಅನೇಕ ಬಗೆಯ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಹೀಗೆ ಅನೇಕ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶಕೀಲ್ ಚೌದರಿ ಅವರು ಸೂಕ್ತ ಗೌರವ ತಂದು ಕೊಟ್ಟಿರುವುದಾಗಿ ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಶಕೀಲ್ ಚೌಧರಿ ಅವರು ಮಾತನಾಡಿ ನನ್ನ ಒಂದು ವರ್ಷದ ಅವಧಿ ನನಗೆ ತೃಪ್ತಿ ತಂದಿದೆ. ಈ ಒಂದು ಅವಧಿಯಲ್ಲಿ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ ಜಿಲ್ಲಾ ಅಧ್ಯಕ್ಷರು ಹಾಗೂ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಸಹಕಾರ ನೀಡಿದ ಸಂಘದ ಎಲ್ಲ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಜಿಲ್ಲಾ ಪದಾಧಿಕಾರಿಗಳಾದ ಶಿವರಂಜನ್ ಸತ್ಯಂಪೇಟೆ, ದೇವೇಂದ್ರಪ್ಪ ಅವಂಟಿ, ಅರುಣ ಕದಂ, ಮಹೇಶ ಚೌಕಿಮಠ ಸೇರಿದಂತೆ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತರಿದ್ದರು.