ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ದೇವದುರ್ಗ.ಆ.೦೧- ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೃತ್ಯವನ್ನ ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ಬಳಿಕ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುಅಲಿ ಕರಿಗುಡ್ಡ ಮಾತನಾಡಿ, ಸಿದ್ರಾಮೋತ್ಸವ ಪೂರ್ವಭಾವಿ ಸಭೆ ವೇಳೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ.
ಹಿರಿಯ ನಾಯಕರಾದ ರಮೇಶ್ ಕುಮಾರ್ ಅವರಲ್ಲಿ ಪ್ರಬುದ್ಧತೆ ಇದ್ದರೂ ವ್ಯಕ್ತತ್ವದಲ್ಲಿ ತೂಕ ಹೊಂದಿಲ್ಲ ಎಂಬುದು ಈ ಹಲ್ಲೆ ಪ್ರಕರಣ ಸಾಬೀತು ಮಾಡಿದೆ ಎಂದರು.
ರಾಜಕೀಯ ಅನುಭವವಿರುವ ಹಾಗೂ ಸ್ಪೀಕರ್ ಹುದ್ದೆ ನಿರ್ವಹಿಸಿರುವ ರಮೇಶ್ ಕುಮಾರ್‌ಗೆ ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂಬುದು ತಿಳಿದಲ್ಲವೇ.? ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣ ಖಂಡನೀಯ ಎಂದರಲ್ಲದೆ ಈ ಕುರಿತು ಕ್ಷಮೆ ಕೇಳಬೇಕು ಮತ್ತು ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಪ್ರತಿನಿತ್ಯ ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿಲೇ ಇವೆ. ಅಭದ್ರತೆಯಲ್ಲಿ ಪತ್ರಕರ್ತರು ಬದುಕುತ್ತಿದ್ದಾರೆ. ಹೀಗಾಗಿ, ಸರ್ಕಾರ ಭದ್ರತೆ ನೀಡಬೇಕು. ವೈದ್ಯ ರಕ್ಷಣೆ ಮಾದರಿಯಲ್ಲಿ ಪತ್ರಕರ್ತರ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಬೇಕು. ಪತ್ರಕರ್ತರ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಲ್ಲೆ ಸಂಬಂಧ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ಪತ್ರಕರ್ತ ಸಂಘದ ಕಾರ್ಯದರ್ಶಿ ನಾಗರಾಜ್ ಸುಟ್ಟಿ, ಪತ್ರಕರ್ತರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ನರಸಿಂಗ್ ರಾವ್ ಸರ್ಕಿಲ್, ಬೆಳ್ಳೆಪ್ಪ ಬಲ್ಲಿದವ್, ರವಿ ಪಾಟೀಲ್ ಅಳ್ಳುಂಡಿ, ನಾಗರಾಜ್ ತೇಲ್ಕಾರ್, ಅಮರೇಶ್ ಚಿಲ್ಕರಾಗಿ, ಸುರೇಶ್ ಗೌಡ, ಗಿರಿಯಪ್ಪ ಪೂಜಾರಿ, ಸುರೇಶ್ ಭವಾನಿ, ಮಾರ್ಕಂಡಯ್ಯ ನಾಡದಾಳ್, ಯಮನೂರಪ್ಪ ಸೇರಿ ಇತರರಿದ್ದರು.