ಪತ್ರಕರ್ತರ ಮೇಲಿನ ಹಲ್ಲೆ ತೀವ್ರ ಖಂಡನೆ

ದೇವದುರ್ಗ,ಮಾ.೦೯- ಲಿಂಗಸೂಗೂರು ತಾಲೂಕಿನ ಉಚ್ಚಾರ ನಂದಿಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಾಪೂರ ಹಟ್ಟಿ ಗ್ರಾಮದಲ್ಲಿ ವರದಿಗೆ ತೆರಳಿದ್ದ ಮುದುಗಲ್ ಏಜಯವಾಣಿ ವರದಿಗಾರ ಶರಣಯ್ಯ ಒಡೆಯರ ಹಾಗೂ ದಿ ಡೈಲಿ ನ್ಯೂಸ್ ವರದಿಗಾರ ಶಿವಶಂಕರಯ್ಯ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಶಾಸಕ ಡಿ.ಎಸ್. ಹೂಲಿಗೇಲಿ ಬೆಂಬಲಗರು ಹಲ್ಲೆ ನಡೆಸಿ ಘಟನೆ ಖಂಡಿಸಿ ಇಲ್ಲಿನ ಮಿನಿವಿಧಾನಸೌಧ ಮುಂದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದೇವದುರ್ಗ ತಾಲೂಕು ಘಟಕ ಗುರುವಾರ ಪ್ರತಿಭಟನೆ ನಡೆಸಿತು.
ಹಿರಿಯ ಪತ್ರಕರ್ತ ನರಸಿಂಗ್‌ರಾವ್ ಸರ್ಕೀಲ್ ಅವರು ಮಾತನಾಡಿ, ಲಿಂಗಸೂಗೂರು ತಾಲ್ಲೂಕಿನ ಉಚ್ಚಾರ ನಂದಿಹಾಳ ಗ್ರಾಪಂ ವ್ಯಾಪ್ತಿಯ ಕನ್ನಾಪೂರ ಹಟ್ಟಿ ಗ್ರಾಮದಲ್ಲಿ ವರದಿಗೆ ತೆರಳಿದ್ದ ಮುದುಗಲ್ ಏಜಯವಾಣಿ ವರದಿಗಾರ ಶರಣಯ್ಯ ಒಡೆಯರ ಹಾಗೂ ಶಿವಶಂಕರಯ್ಯ ಮೇಲೆ ಗ್ರಾಪಂ ಅಧ್ಯಕ್ಷ ಮತ್ತು ಶಾಸಕ ಡಿ.ಎಸ್.ಹೂಲಿಗೇಲಿ ಬೆಂಬಲಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪತ್ರಕರ್ತರ ಮೇಲೆ ರಾಜ್ಯದಲ್ಲಿ ನಿರಂತರವಾಗಿ ಹಲ್ಲೆ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಇದರಿಂದ ನಿರ್ಭಯವಾಗಿ ವರದಿ ಮಾಡಲು ಹಿನ್ನಡೆಯಾಗಿದೆ. ಸರ್ಕಾರ ಈ ಬಗ್ಗೆ ಕಾಳಜಿವಹಿಸಬೇಕಿದೆ. ಪತ್ರಕರ್ತರ ಮೇಲಿನ ಹಲ್ಲೆ ಘಟನೆ ಪ್ರಜಾಪ್ರಭುತ್ವದ ಮೇಲೆ ನಡೆದ ಹಲ್ಲೆ ಘಟನೆಯಾಗಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಕೂಡಲೇ ಹಲ್ಲೆ ನಡೆಸಿ ಆರೋಪಿಗಳನ್ನು ಬಂಧಿಸಿ, ಅವರಿಗೆ ಕಠಿಣ ಕಾನೂನು ಶಿಕ್ಷೆ ನೀಡಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಪೊಲೀಸರು ಭದ್ರತೆ ಕೈಗೊಳ್ಳಬೇಕು. ಪತ್ರಕರ್ತರ ಮೇಲೆ ಹಲ್ಲೆ ತಡೆಗೆ ರಾಜ್ಯ ಸರ್ಕಾರ ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಬಾಬುಅಲಿ ಕರಿಗುಡ್ಡ, ಕಾರ್ಯದರ್ಶಿ ನಾಗರಾಜ ಸುಟ್ಟಿ, ಹಿರಿಯ ಪತ್ರಕರ್ತರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ನರಸಿಂಗ್ ರಾವ್ ಸರ್ಕೀಲ್, ಜಿಲ್ಲಾ ಕಾರ್ಯದರ್ಶಿ ಸೂಗೂರೇಶ್ವರ ಗುಡಿ, ನಾಗರಾಜ ತೇಲ್ಕರ್, ಬಂದೇನವಾಜ್ ನಾಗಡದನ್ನಿ, ಬಸವರಾಜ ಬ್ಯಾಗವಾಟ್, ಮಹಾಲಿಂಗ ದೊಡ್ಡಮನಿ, ಸುರೇಶ ಭವಾನಿ, ಪ್ರಕಾಶರೆಡ್ಡಿ, ಮಾರ್ಕಂಡಯ್ಯ ನಾಡದಾಳ, ರಂಗನಾಥ ಕೊಂಬಿನ್, ಅಮರೇಶ ನಾಯಕ ಇತರರಿದ್ದರು.