ಪತ್ರಕರ್ತರ ಮಕ್ಕಳಿಗೆ ಉದ್ಯೋಗ ಕೊಡಿಸುವ ಭರವಸೆ

ಕೋಲಾರ,ಮಾ.೨೫- ಜಿಲ್ಲೆಯ ಪತ್ರಕರ್ತರ ಸಂಘದ ಆಪತ್ಕಾಲಿನ ಸಂದರ್ಭದಲ್ಲಿ ನೆರವಾಗಲು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಆರಂಭಿಸಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಇಂಡಿಯನ್ ಮೂವ್‌ಮೆಂಟ್ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಸುಭಾನ್ ಅವರು ೧ ಲಕ್ಷ ರೂಗಳ ದೇಣಿಗೆ ನೀಡಿದ್ದಾರೆ.
ಮೂಲತ: ಕೋಲಾರ ಜಿಲ್ಲೆಯವರಾದ ಅಬ್ದುಲ್ ಸುಭಾನ್ ಇದೀಗ ದೇಶ ವಿದೇಶಗಳಲ್ಲಿ ತಮ್ಮ ಉದ್ಯಮವನ್ನು ನಡೆಸುತ್ತಿದ್ದು, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯನ್ನು ೩ ವರ್ಷಗಳ ಹಿಂದೆ ಸ್ಥಾಪಿಸಿದ್ದಾರೆ.
ಕೋಲಾರದ ಪತ್ರಕರ್ತರ ಭವನದಲ್ಲಿ ಪಕ್ಷ ಸಂಘಟನೆಗಾಗಿ ಸಭೆಯನ್ನು ಕರೆದಿದ್ದ ಅಬ್ದುಲ್ ಸುಭಾನ್ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರಿಯಾಶೀಲ ಕಾರ್ಯಚಟುವಟಿಕೆಗಳನ್ನು ಗಮನಿಸಿ ತಮ್ಮ ತಾಯ್ನಾಡಿನ ಪತ್ರಕರ್ತರ ಒಳಿತಿಗಾಗಿ ಸಹಾಯಹಸ್ತ ಚಾಚಲು ಸ್ವಯಂ ಪ್ರೇರಣೆಯಿಂದ ಮುಂದಾಗಿದ್ದಾರೆ.
ಸ್ಥಳದಲ್ಲಿಯೇ ಒಂದು ಲಕ್ಷ ರೂಪಾಯಿ ಚೆಕ್‌ನ್ನು ಅಬ್ದುಲ್ ಸುಭಾನ್ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಮಂಗಳವಾರ ಸಂಜೆ ಹಸ್ತಾಂತರಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ೨೫೦ ಮಂದಿ ಸದಸ್ಯರ ಒಳಿತಿಗಾಗಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ೧ ಕೋಟಿ ರೂಪಾಯಿ ಸಂಗ್ರಹಿಸುವ ಹೊಂದಿರುವುದಾಗಿ ಚೆಕ್ ಸ್ವೀಕರಿಸಿದ ಪತ್ರಕರ್ತರ ಸಂಘದ ಬಿ.ವಿ.ಗೋಪಿನಾಥ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ಸುಭಾನ್ ಸಂಘದ ೧ ಕೋಟಿ ರೂ ನಿಧಿಯ ಗುರಿ ಸಾಧನೆಯಾಗುವವರೆಗೂ ತಾವೇ ೧ ಕೋಟಿ ರೂಗಳನ್ನು ತಮ್ಮ ಉದ್ಯಮದಲ್ಲಿ ಮೀಸಲಿರಿಸಿ ಅದಕ್ಕೆ ಬರುವ ಬಡ್ಡಿಯನ್ನು ಪತ್ರಕರ್ತರ ಸಂಘಕ್ಕೆ ಹಸ್ತಾಂತರಿಸುವುದಾಗಿ ಭರವಸೆ ನೀಡಿದರು.
ಬಹುತೇಕ ಪತ್ರಕರ್ತರ ಕುಟುಂಬಗಳು ಸಂಕಷ್ಟದಲ್ಲಿರುವ ಅಂಶವನ್ನು ಮನಗಂಡು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶಿಫಾರಸ್ಸು ಮಾಡುವ ಪತ್ರಕರ್ತರ ಕುಟುಂಬದ ಒಬ್ಬ ಸದಸ್ಯರಿಗೆ ತಮ್ಮ ಉದ್ಯಮಗಳಲ್ಲಿ ಉದ್ಯೋಗಾವಕಾಶ ದೊರಕಿಸುವ ಭರವಸೆಯನ್ನೂ ಅಬ್ದುಲ್ ಸುಭಾನ್ ನೀಡಿದರು.
ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಉದಾರವಾಗಿ ದೇಣಿಗೆ ನೀಡಿದಲ್ಲದೆ ಪತ್ರಕರ್ತರ ಕುಟುಂಬದ ಸದಸ್ಯರಿಗೆ ಉದ್ಯೋಗವಕಾಶ ದೊರಕಿಸುವ ಭರವಸೆ ನೀಡಿದ ಅಬ್ದುಲ್ ಸುಭಾನ್‌ರನ್ನು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.