ಪತ್ರಕರ್ತರ ಕೊಡುಗೆ ಅಪಾರ : ಸೊನ್ನ ಶ್ರೀ

ಜೇವರ್ಗಿ :ಜು.27: ಸಮಾಜದ ಅಂಕುಡೊಂಕುಗಳ ಚಿಕಿತ್ಸಕರಾಗಿ ದುಡಿಯುತ್ತಿರುವ ಪತ್ರಕರ್ತರ ಕೊಡುಗೆ ಸಾಕಷ್ಟಿದೆ. ತಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು, ಎಷ್ಟೋ ಸಾರಿ ತಮ್ಮ ವ್ಯಯಕ್ತಿಕ ಬದುಕುಗಳನ್ನು ಮೀರಿ ನಿಂತು ಇಡೀ ಪ್ರಪಂಚಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದು ಸೊನ್ನದ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜ ಕಟ್ಟುವ ಮಹತ್ವದ ಜವಬ್ದಾರಿಯನ್ನು ನಿರ್ವಹಿಸುವ ಮಾಧ್ಯಮಗಳನ್ನು ಮುನ್ನಡೆಸುವ ಎಲ್ಲಾ ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರಾಜಶೇಖರ ಸೀರಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿ ಪತ್ರಿಕಾ ಮಾಧ್ಯಮ ಕೆಲಸ ಮಾಡುತ್ತಿದ್ದು, ಯಾವುದೇ ಒಂದು ಪ್ರಜಾಸತ್ತಾತ್ಮಕ ದೇಶದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಪತ್ರಿಕೆಗಳು ವಹಿಸುವ ಪಾತ್ರ ಅತ್ಯಮೂಲ್ಯ. ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ಅವು ಒಂದೊಮ್ಮೆ ಪಕ್ಷಪಾತಿಯಾದಲ್ಲಿ ಸರಕಾರದ ಹಾಗೂ ಜನರ ಮಾನಹರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಮರೆಪ್ಪ ಬೇಗಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಸಂಜಯಸಿಂಗ್, ಜಿಪಂ ಮಾಜಿ ಸದಸ್ಯರಾದ ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ವಿಜಯಕುಮಾರ ಹಿರೇಮಠ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಕಸಾಪ ಅಧ್ಯಕ್ಷ ಎಸ್.ಕೆ.ಬಿರಾದಾರ, ಎಸ್.ಟಿ.ಬಿರಾದಾರ, ಸರಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಮಹಮದ್ ಅಲ್ಲಾವುದ್ದೀನ್ ಸಾಗರ, ಸಂಜಯ ಪವಾರ, ಅಮೀನಪ್ಪ ಹೊಸಮನಿ, ಹೆಚ್.ಬಿ.ಪಾಟೀಲ, ರಾಜಶೇಖರ ಮುತ್ತಕೋಡ, ಚಂದ್ರಶೇಖರ ನೇರಡಗಿ, ರವಿಚಂದ್ರ ಗುತ್ತೇದಾರ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಶ್ರೀಹರಿ ಕರಕಿಹಳ್ಳಿ, ಸಿದ್ರಾಮ ಕಟ್ಟಿ, ಸುರೇಶ ಗುಡೂರ, ಪತ್ರಕರ್ತರಾದ ರೇವಣಸಿದ್ದ ಹೆಗಡೆ, ಶರಣು ಬಡಿಗೇರ, ಮಹೇಶ ಕೋಕಿಲೆ, ಶರಣು ನೇರಡಗಿ, ಗೌಸ್ ಇನಾಂದಾರ ಸೇರಿದಂತೆ ಹಲವಾರು ಜನ ಆಗಮಿಸಿದ್ದರು.

 ಇದೇ ವೇಳೆ ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ ಅವರಿಗೆ ದಕ್ಷ-ಚಾಣಕ್ಯ ಪ್ರಶಸ್ತಿ, ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಭಗೀರಥ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.