ಪತ್ರಕರ್ತರು ಸಮಾಜದ ಹೊಣೆಗಾರಿಕೆ ಮರೆಯಬಾರದು-ಡಾ.ಬಿ.ಕೆ ರವಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಆ.01 ದೇಶ ಹಾಗೂ ಸಮಾಜಕ್ಕೆ ಮಾಹಿತಿ ಮುಟ್ಟಿಸುವ ಪವಿತ್ರ ಕಾರ್ಯ ಮಾಡುತ್ತಿರುವುದರಿಂದ ಪತ್ರಕರ್ತರ ಬಗ್ಗೆ ಸಮಾಜದಲ್ಲಿ ಅಪಾರ ಗೌರವವವಿದ್ದು ಸಾಮುದಾಯಿಕ ಆರೋಗ್ಯ ಹಾಗು ಮುಂದಿನ ಪೀಳಗೆಯನ್ನು ತಯಾರು ಮಾಡುವ ಜವಾಬ್ದಾರಿಯೂ ಇರುವುದರಿಂದ ಪತ್ರಕರ್ತರು ಯಾವುದೇ ಸಂದರ್ಭದಲ್ಲಿ ಸಮಾಜದ ಹೊಣೆಗಾರಿಕೆ ಮಾತ್ರ ಮರೆಯಬಾರದು ಎಂದು ನವದೆಹಲಿಯ ಅಖಿಲ ಭಾರತ ಸಂವಹನ ಮತ್ತು ಮಾಧ್ಯಮ ಸಂಘಟನೆಯ ಉಪಾಧ್ಯಕ್ಷ ಬಿ.ಕೆ.ರವಿ ತಿಳಿಸಿದರು.
 ಪಟ್ಟಣದ ಜಿವಿಪಿಪಿ ಪ್ರಥಮ ದರ್ಜೆ ಕಾಲೇಜ್‍ನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ಸ್ಥಿತಿ ಗತಿ ಕುರಿತು ಅವರು ಮಾತನಾಡಿದರು. ಸಮಾಜದಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಪತ್ರಕರ್ತರು ನೀಡುವ ಉಪಯುಕ್ತ ಮಾಹಿತಿಯನ್ನು ಮಾಧ್ಯಮ ಅವಲಂಬಿಸಿದೆ. ಮೊದಲು ಪತ್ರಿಕೋದ್ಯಮ ಸಮಾಜ ಸೇವೆ ಆಗಿತ್ತು, ಜಾಗತೀಕರಣ ಹಾಗೂ ತಂತ್ರಜ್ಞಾನದ ಫಲವಾಗಿ ಭಾರತೀಯ ಪತ್ರಿಕೋದ್ಯಮದಲ್ಲಿ ಗಮನಾರ್ಹ ಬದಲಾವಣೆ ಆಗಿ ಉದ್ಯಮವಾಗಿ ಬೆಳೆದಿದೆ. 3 ಸಾವಿರ ಬಿಲಿಯನ್ ರೂಪಾಯಿಗಳಷ್ಟು ವಾರ್ಷಿಕ ವಯಿವಾಟು ನಡೆಸಿ ಜಾಗತಿಕ ಮಟ್ಟದಲ್ಲಿ ಗರುತಿಸಿಕೊಂಡಿತ್ತು. ಈಗಲೂ ಪತ್ರಿಕೆಗಳಲ್ಲಿ ಬರುವ ಸುದ್ದಿಗಳಿಗೆ ಜನರು ಇಟ್ಟಿರುವ ವಿಶ್ವಾಸ ಹೋಗಿಲ್ಲ, ಜನರ ನಂಬಿಕೆ ಹಾಗೂ ವಿಶ್ವಾಸರ್ಹತೆ ಎಲ್ಲಿಯವರೆಗೂ ಇರುತ್ತದೆ ಅಲ್ಲಿಯವರೆಗೂ ಪತ್ರಕರ್ತರ ಭವಿಷ್ಯ ಉಜ್ವಲವಾಗಿರುತ್ತದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಜನರ ನಂಬಿಕೆ ಯಾವಾಗ ಕಳೆದುಕೊಳ್ಳುವಿರೋ ಅವಾಗ ನಿಮ್ಮ ಅಸ್ತಿತ್ವವೇ ಉಳಿಯುವುದಿಲ್ಲ ಇದನ್ನು ಎಲ್ಲ ಪತ್ರಕರ್ತರು ತಿಳಿದುಕೊಳ್ಳಬೇಕು. 2019ರಲ್ಲಿ ಕೋವಿಡ್ ಸಂಕಷ್ಟದಲ್ಲಿ ಶೇ 43 ರಷ್ಟು ಪತ್ರಕರ್ತರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸಣ್ಣ ಪತ್ರಿಕೆಗಳು ಹಾಗೂ ಮದ್ಯಮ ಪತ್ರಿಕೆಗಳು ತೊಂದರೆಯಲ್ಲಿವೆ. ನೈಜ ಪತ್ರಕರ್ತರು ಒತ್ತಡ ಬದುಕಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಯುವ ಭಾಷಾ ಪತ್ರಕರ್ತರಿಗೆ ತಂತ್ರಜ್ಞಾನ ಪರಿಚಯಿಸಿ ಕೊಡುವ ತರಬೇತಿ ಕಾರ್ಯಾಗಾರ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಸರ್ಕಾರಕ್ಕೆ ಒತ್ತಡ ತರುವ ಮೂಲಕ ಪತ್ರಕರ್ತರ ಏಳ್ಗೆಗೆಗೆ ಹಾಗೂ ರಕ್ಷಣೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರದ ಶಾಸಕ ಎಸ್ ಭೀಮನಾಯ್ಕ್ ಮಾತನಾಡಿ ಪತ್ರಕರ್ತರು ಇಂದಿನ ದಿನಗಳಲ್ಲಿ ಸಂಕಷ್ಟದಲ್ಲಿದ್ದಾರೆ, ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸಲು ವಿಧಾನಸೌದದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು. ಅಲ್ಲದೇ ನಿವೇಶನ ರಹಿತ ಪತ್ರಕರ್ತರಿಗೆ ನಿವೇಶನ ಹಾಗೂ ಮನೆ ನೀಡಲಾಗುವುದು. ಯಾವುದೇ ಸುದ್ದಿಯನ್ನು ಪತ್ರಕರ್ತರು ವಸ್ತು ನಿಷ್ಟವಾಗಿ ಬರೆಯಬೇಕು, ಶೋಷಿತರ ಧ್ವನಿಯಾಗಿ ಪ್ರಾಮಾಣಿಕವಾಗಿ ಜನರಿಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು, ಜನಪ್ರತಿನಿಧಿಗಳಾದ ನಾವುಗಳು ತಪ್ಪು ಮಾಡಿದಾಗ ತಿದ್ದಿಕೊಳ್ಳುವ ಹಾಗೆ ನಿಮ್ಮ ಬರಹಗಳು ನಮಗೆ ಪ್ರೇರೆಣೆ ಆಗಬೇಕು. ನಾನು ಮಾಲ್ವಿ ಜಲಾಶಯ, ಚಿಲವಾರು ಬಂಡಿ ಏತ ನೀರಾವರಿ ಮತ್ತು ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ಅಭಿವೃದ್ದಿ ಯೋಜನೆಗಳು ಸಾಕಾರಗೊಳ್ಳಲು ನಿಮ್ಮ ಬರಹಗಳು ನನಗೆ ಶಕ್ತಿ ತುಂಬಿವೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಜಿ.ಸತ್ಯನಾರಾಯಣ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಸ್ತಾವಿಕ ನುಡಿ ನಿಕಟ ಪೂರ್ವ ತಾಲೂಕ ಅಧ್ಯಕ್ಷ ಬುಡ್ಡಿ ಬಸವರಾಜ್, ಜಿವಿಪಿಪಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ವೆಂಕಟೇಶ್ ಮಾತನಾಡಿದರು. ಅಮ್ಮ ಸಂಸ್ಥೆಯ ಅಧ್ಯಕ್ಷೆ ಸಾಹಿರಾಬಾನು, ತಾಪಂ ಮಾಜಿ ಸದಸ್ಯ ಜಾಣಾ ಅನಿಲ್ ಕುಮಾರ್, ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಉನ್ನತ ಅಂಕಗಳಿಸಿ ರ್ಯಾಂಕ್ ಪಡೆದ ಕೆ.ಕಿರಣ, ಹಾಗು ಪುರಸಭೆಯ ಪೌರ ಕಾರ್ಮಿಕ ಯಮನೂರಪ್ಪ ಇವರನ್ನು ಸನ್ಮಾನಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಉಮಾಪತಿ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು.ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಲಕ್ಷ್ಮಣ, ಜಿಲ್ಲಾ ಉಪಾಧ್ಯಕ್ಷ ಉಜ್ಜನಿ ರುದ್ರಪ್ಪ, ಮಂಜುನಾಥ ಪಟ್ಟಣಶೆಟ್ಟಿ, , ಬಿಇಓ ಎಂಸಿ ಆನಂದ್, ಇಓ ರಮೇಶ್ ಮಹಾಲಿಂಗಾಪುರ ವೇದಿಕೆಯ ಮೇಲಿದ್ದರು, ತಾಲೂಕಿನ ನಾನಾ ಸಂಘಟನೆಯ ಮುಖಂಡರುಗಳು ಭಾಗವಹಿಸಿದ್ದರು. ಪ್ರಾರ್ಥನೆ ಕೋಗಳಿ ವೀರಭದ್ರ ಶೆಟ್ಟರ್ ಮಾಡಿದರೆ, ಸಿ.ಶಿವಾನಂದ್ ಸ್ವಾಗತಿಸಿದರು, ಕು.ನಂದಿನಿ ಮತ್ತು ಜೆ.ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷ ಸುರೇಶ ಯಳಕಪ್ಪನವರ್ ವಂದಿಸಿದರು.

Attachments area