ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡಲಿ : ಪಟ್ಟದ್ದೇವರು

ಔರಾದ್ : ಅ.1:ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ಶ್ರೇಷ್ಠವಾದದ್ದು, ಅನೇಕ ಸವಾಲುಗಳ ಮಧ್ಯೆ ಜನರಿಗೆ ಮಾಹಿತಿ ನೀಡುವ ಕಾರ್ಯ ಪತ್ರಕರ್ತರು ಮಾಡುತ್ತಾರೆ. ಪತ್ರಕರ್ತರು ಸೇವೆ ಅಮೂಲ್ಯವಾದದ್ದು ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. ಪಟ್ಟಣ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂದ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಪತ್ರಕರ್ತರು ಸರಕಾರ ಮತ್ತು ಸಮಾಜದ ಪ್ರತಿಬಿಂಬ ಹಾಗೂ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಪತ್ರಕರ್ತರು ಕನ್ನಡಿ ಇದ್ದಂತೆ, ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸ ಇದ್ದ ರೀತಿಯಲ್ಲಿ ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ದಿಕ್ಸೂಚಿಯಾಗಿ ಸೇವೆ ನೀಡುತ್ತಾರೆ ಎಂದರು.

ಏಕತಾ ಫೌಂಡೇಶನ್ ಅಧ್ಯಕ್ಷ ರವಿಂದ್ರ ಸ್ವಾಮಿ ಮಾತನಾಡಿ, ಕೈಯಲ್ಲಿ ಪೆನ್ನು ಹಿಡಿದು ಬರೆಯಬೇಕು ಎಂಬ ಹಂಬಲವಿರುತ್ತದೆ. ಆದರೆ ಜೀವನದ ನಾನಾ ಸಮಸ್ಯೆಗಳು ಅವರಿಗೆ ಎದುರಾಗುತ್ತವೆ. ಉತ್ತಮ ಪತ್ರಕರ್ತರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಎಲ್ಲರಿಂದ ಆಗಬೇಕು. ಸಮಾಜಮುಖಿ ಪತ್ರಕರ್ತರಿಗೆ ಸಮಾಜದಲ್ಲಿ ಬೆಲೆ ಇದ್ದೇ ಇರುತ್ತದೆ ಎಂದರು.

ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಡಿಕೆ ಗಣಪತಿ ಮಾತನಾಡಿ, ಪ್ರಾಮಾಣಿಕತೆ, ನಿಷ್ಠುರತೆ, ದಿಟ್ಟತನದ ಪತ್ರಕರ್ತರು ಇಂದು ಅನೇಕ ಸವಾಲು ಎದುರಿಸಬೇಕಾದ ಸ್ಥಿತಿ ಇದೆ. ಇಂದಿನ ದಿನಮಾನದಲ್ಲಿ ಪತ್ರಕರ್ತರ ಜೀವನ ಬಹಳ ಕಷ್ಟದ ಜೀವನವಾಗಿದೆ. ಕೋವಿಡ್ ವೇಳೆ ರಾಜ್ಯದಲ್ಲಿ 80 ಜನ ಪತ್ರಕರ್ತರು ಮೃತಪಟ್ಟಿದ್ದು, ಸಂಘದ ಕಾಳಜಿಯಿಂದ ತಲಾ 5 ಲಕ್ಷ ರೂ. ಪರಿಹಾರ ಸರಕಾರದಿಂದ ನೀಡಿಸಲಾಗಿದೆ ಎಂದರು.

ಪತ್ರಕರ್ತ ವಿಶ್ವರಾಧ್ಯ ಎಸ್. ಹಂಗನಳ್ಳಿ ಉಪನ್ಯಾಸಕರಾಗಿ ಮಾತನಾಡಿ, ಪತ್ರಕರ್ತರು ಸದಾ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸಮಾಜದ ಆಗು ಹೋಗುಗಳ ಕುರಿತು ಅಧ್ಯಯನ ಮಾಡಿ ವರದಿ ಮಾಡುತ್ತಾ ಸಮಾಜದ ಸ್ವಾಸ್ಥ್ಯ ಕಾಪಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟಿ ಧರ್ಮಪುರೆ, ಪ್ರ.ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕಾರ್ಯದರ್ಶಿ ಪ್ರಥ್ವಿರಾಜ್, ಸುನಿಲ ಕುಲಕರ್ಣಿ, ತಾಪಂ ಇಒ ಶಿವಕುಮಾರ ಘಾಟೆ ಮಾತನಾಡಿದರು. ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಅವರು ಭಾಲ್ಕಿ ಶ್ರೀಗಳಾದ ಡಾ. ಬಸವಲಿಂಗ ಪಟ್ಟದ್ದೇವರು ಅವರಿಗೆ ಪತ್ರಕರ್ತರ ಸಂಘದಿಂದ ನೀಡಿದ ಅಭಿನಂದನಾ ಪತ್ರ ಓದಿದರು. ಪ್ರಮುಖರಾದ ಬಂಡೆಪ್ಪ ಕಂಟೆ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ತಾಪಂ ಸಹಾಯಕ ನಿರ್ದೇಶಕ ಸುದೇಶ, ಕಸಾಪ ಅಧ್ಯಕ್ಷ ಶಾಲಿವಾನ ಉದಗೀರೆ ಸೇರಿದಂತೆ ಅನೇಕರಿದ್ದರು. ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಪ್ರಾಸ್ತವಿಕ ಮಾತನಾಡಿದರು. ಸುನಿಲ ಜಿರೋಬೆ ಸ್ವಾಗತಿಸಿದರು. ರತ್ನದೀಪ ಕಸ್ತೂರೆ ನಿರೂಪಿಸಿದರು. ಅಂಬಾದಾಸ ನೇಳಗೆ ವಂದಿಸಿದರು.

ಭಾಲ್ಕಿ ಶ್ರೀಗಳಿಗೆ ಪತ್ರಕರ್ತ ಸಂಘದಿಂದ ಸತ್ಕಾರ

ಸಿರಿಗನ್ನಡಂ ಗೆಲ್ಗೆ ರಾ.ಹ ದೇಶಪಾಂಡೆ ಪ್ರಶಸ್ತಿ ಪುರಸ್ಕøತರಾದ ಭಾಲ್ಕಿ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಪ್ರಥಮ ಬಾರಿಗೆ ಔರಾದ್‍ಗೆ ಆಗಮಿಸಿದ್ದು, ಈ ವೇಳೆ ಪತ್ರಕರ್ತ ಸಂಘ ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಹಾಗೂ ಪತ್ರಕರ್ತರು, ಏಕತಾ ಪೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ, ಪ್ರಕಾಶ ಘೂಳೆ, ಶರಣಪ್ಪ ಪಂಚಾಕ್ಷರಿ, ಶರಣಪ್ಪ ನಾಗಲಗಿದ್ದೆ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಘಾಟೆ, ರೈತ ಸಂಘದ ಪದಾಧಿಕಾರಿಗಳಾದ ಕಲ್ಲಪ್ಪ ದೇಶಮುಖ, ಶ್ರೀಮಂತ ಬಿರಾದಾರ್, ಪ್ರಕಾಶ ಕೋಟೆ, ಮುಖ್ಯಗುರು ಸುಲ್ತಾನ್, ಗ್ರಾಪಂ ಅಧ್ಯಕ್ಷ ಮಾರುತಿ , ವಿಜಯ ಮೇತ್ರೆ, ಸಿದ್ದರಾಮೇಶ್ವರ ಕಾಲೇಜಿನ ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ಬಸವೇಶ್ವರ ಡಿಇಡಿ ಕಾಲೇಜಿನ ಪ್ರಾಂಶುಪಾಲ ಶರಣಪ್ಪ ನೌಬಾದೆ ಸೇರಿದಂತೆ ನಾನಾ ಸಂಘ ಸಂಸ್ಥೆಯವರು ಸತ್ಕರಿಸಿದರು.

ಶ್ರೀಗಳಿಗೆ ಅದ್ಧೂರಿ ಸ್ವಾಗತ

ಸಿರಿಗನ್ನಡಂ ಗೆಲ್ಗೆ ರಾ.ಹ ದೇಶಪಾಂಡೆ ಪ್ರಶಸ್ತಿ ಪುರಸ್ಕøತರಾದ ಡಾ. ಬಸವಲಿಂಗ ಪಟ್ಟದ್ದೇವರು ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಯುವತಿಯರು ಶ್ರೀಗಳಿಗೆ ಹೂ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಇದು ಎಲ್ಲರ ಗಮನ ಸೆಳೆಯಿತು.