
ಭಾಲ್ಕಿ:ಆ.6: ಪತ್ರಕರ್ತರು ಸಮಾಜದ ನಿಜವಾದ ಕಣ್ಣುಗಳಾಗಿದ್ದಾರೆ ಎಂದು ಶಾರದಾ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ವಸಂತ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಶಾರದಾ ಪಬ್ಲಿಕ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಕನ್ನಡ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ಆಗು ಹೋಗುವ ಕೆಲವು ಪ್ರಸಂಗಗಳನ್ನು ಎಲ್ಲರ ಕಣ್ಮುಂದೆ ಇಡುವ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಸಮಾಜದ ನಿಜವಾದ ಕಣ್ಣುಗಳಾಗಿದ್ದಾರೆ. ಪತ್ರಿಕೆಗಳಿಂದ ಸಾಕಷ್ಟು ಪ್ರಯೋಜನವಿದೆ. ಸಮಾಜದಲ್ಲಿಯ ಮೂರು ಸ್ಥಂಬಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಕುಂಠಿತ ಗೊಂಡಾಗ ಅವುಗಳನ್ನು ಬಡಿದೆಬ್ಬಿಸುವ ಕಾರ್ಯ ಪತ್ರಿಕಾರಂಗ ಮಾಡುತ್ತದೆ. ಹೀಗಾಗಿ ಪತ್ರಕರ್ತರು ಸದಾ ಎಲ್ಲರ ಗೌರವಕ್ಕೆ ಪಾತ್ರರಾಗಿರುತ್ತಾರೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಶೋಕ ರಾಜೋಳೆ ಮಾತನಾಡಿ, ತಾಲೂಕು ಮಟ್ಟದ ಪತ್ರಕರ್ತರ ಕಾರ್ಯ ತುಂಬಾ ಕ್ಲಿಷ್ಟಕರವಾಗಿದೆ. ಹೆಚ್ಚಿನ ಸಂಭಾವನೆ ಪಡೆಯದೇ, ಸಮಾಜದ ಓರೆ ಕೋರೆಗಳನ್ನು ಜನರ ಮುಂದಿಡುವ ಕಾರ್ಯ ತಾಲೂಕು ಪತ್ರಕರ್ತರು ಮಾಡುತ್ತಾರೆ. ಅವರಿಗೆ ಸರ್ಕಾರದಿಂದ ಸಹಾಯದ ಅಗತ್ಯವಿದೆ ಎಂದು ಹೇಳಿದರು.
ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗಣಪತಿ ಬೋಚರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂತೋಷ ಬಿಜಿಪಾಟೀಲ, ದೀಪಕ ಥಮಕೆ, ಭದ್ರೇಶ ಗುರಯ್ಯಾಸ್ವಾಮಿ, ಸಂತೋಷ ಹಡಪದ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ಮುಖ್ಯಗುರು ಸ್ವಾಗತಿಸಿದರು. ಇಂಗ್ಲೀಷ ಶಿಕ್ಷಕ ನಿರೂಪಿಸಿದರು. ಕನ್ನಡ ಶಿಕ್ಷಕ ವಂದಿಸಿದರು.